IPL 2024: 5785 ದಿನಗಳ ಬಳಿಕವೂ ಹಳೆಯ ಅಧ್ಯಾಯ ಮುಂದುವರೆಸಿದ RCB
TV9 Web | Updated By: ಝಾಹಿರ್ ಯೂಸುಫ್
Updated on:
Mar 23, 2024 | 6:29 AM
IPL 2024: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಎಸ್ಕೆ ಆಘಾತ ನೀಡಿದೆ. ಮೊದಲ ಪಂದ್ಯದಲ್ಲೇ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಆಗಿಯೇ ಐಪಿಎಲ್ ಅಭಿಯಾನ ಆರಂಭಿಸಿದೆ.
1 / 6
ಇದು RCBಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದೊಂದಿಗೆ ಐಪಿಎಲ್ (IPL 2024) ಅಭಿಯಾನ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5785 ದಿನಗಳ ಬಳಿಕವೂ ಹಳೆಯ ಅಧ್ಯಾಯವನ್ನು ಮುಂದುವರೆಸಿದೆ. ಅಂದರೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್ಕೆ ವಿರುದ್ಧ ಮತ್ತೊಮ್ಮೆ ಆರ್ಸಿಬಿ ಮುಗ್ಗರಿಸಿದೆ.
2 / 6
ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
3 / 6
174 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿ ನಿರಾಯಾಸವಾಗಿ ಗೆಲುವು ದಾಖಲಿಸಿತು. ಈ ಜಯದೊಂದಿಗೆ ತವರಿನಲ್ಲಿ ಆರ್ಸಿಬಿ ವಿರುದ್ಧದ ಗೆಲುವಿನ ನಾಗಾಲೋಟ ಮುಂದುವರೆಸಿದೆ.
4 / 6
ಅಂದರೆ ಆರ್ಸಿಬಿ ತಂಡವು ಚೆನ್ನೈನಲ್ಲಿ ಗೆಲುವು ದಾಖಲಿಸಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ. 2008 ರಲ್ಲಿ ಮೊದಲ ಜಯ ಸಾಧಿಸಿದ ಬಳಿಕ ಸಿಎಸ್ಕೆ ವಿರುದ್ಧ ಚೆಪಾಕ್ (ಎಂಎ ಚಿದಂಬರಂ ಸ್ಟೇಡಿಯಂ) ಮೈದಾನದಲ್ಲಿ ಗೆಲುವು ಕಂಡಿಲ್ಲ.
5 / 6
2008 ರಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ 112 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್ಸಿಬಿ 14 ರನ್ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ ಆರ್ಸಿಬಿ ತಂಡವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್ಕೆ ವಿರುದ್ಧ ಗೆಲುವು ದಾಖಲಿಸಿಲ್ಲ.
6 / 6
ಇಂಟ್ರೆಸ್ಟಿಂಗ್ ವಿಷಯ ಎಂದರೆ, ಆರ್ಸಿಬಿ ಚೆಪಾಕ್ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದಾಗ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರಲಿಲ್ಲ. ಸಿಎಸ್ಕೆ ತಂಡದ ಈಗಿನ ಕೋಚ್ ಸ್ಟೀಫನ್ ಫ್ಲೆಮಿಂಗ್ ಅಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾಗಿದ್ದರು. ಇದೀಗ ಕಾಲವೇ ಉರುಳಿದಿದೆ. ಆದರೆ ಹೊಸ ಅಧ್ಯಾಯದೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ಆರ್ಸಿಬಿ 16 ವರ್ಷಗಳ ಹಳೆಯ ಅಧ್ಯಾಯವನ್ನೇ ಮುಂದುವರೆಸಿದೆ.
Published On - 6:28 am, Sat, 23 March 24