IPL 2024: RCB ಪ್ಲೇಆಫ್ ಪ್ರವೇಶಿಸಲು ಯಾವೆಲ್ಲಾ ತಂಡ ಸೋಲಬೇಕು?
TV9 Web | Updated By: ಝಾಹಿರ್ ಯೂಸುಫ್
Updated on:
May 13, 2024 | 8:07 AM
IPL 2024: ಐಪಿಎಲ್ ಸೀಸನ್ 17 ರಲ್ಲಿ ಆರ್ಸಿಬಿ ತಂಡವು ಒಟ್ಟು 13 ಪಂದ್ಯಗಳನ್ನಾಡಿದೆ. ಈ ಹದಿಮೂರು ಮ್ಯಾಚ್ಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಫಾಫ್ ಪಡೆ ಇದೀಗ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನು ಆರ್ಸಿಬಿ ತಂಡದ ಕೊನೆಯ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ.
1 / 7
IPL 2024: ಐಪಿಎಲ್ ಸೀಸನ್ 17 ರ ಪ್ಲೇಆಫ್ ರೇಸ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೆ, ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿದೆ. ಇದೀಗ ಸಿಎಸ್ಕೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಆರ್ಸಿಬಿ 5ನೇ ಸ್ಥಾನಕ್ಕೆ ಬಂದು ನಿಂತಿದೆ.
2 / 7
ಇತ್ತ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಹೀಗಾಗಿ ಈ ಪಂದ್ಯವು ಪ್ಲೇಆಫ್ ಹಂತಕ್ಕೇರಲು ಉಭಯ ತಂಡಗಳಿಗೆ ನಿರ್ಣಾಯಕ. ಈ ಮ್ಯಾಚ್ನಲ್ಲಿ ಆರ್ಸಿಬಿ ಗೆದ್ದರೆ ಟಾಪ್-4 ಹಂತಕ್ಕೇರಲಿದೆ.
3 / 7
ಆದರೆ ಇದೊಂದೇ ಪಂದ್ಯದ ಗೆಲುವಿನಿಂದ ಆರ್ಸಿಬಿ ತಂಡದ ಪ್ಲೇಆಫ್ ಖಚಿತವಾಗುವುದಿಲ್ಲ. ಬದಲಾಗಿ ಅತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕೂಡ 12 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲಿದೆ. ಹೀಗಾಗಿ ಈ ತಂಡಗಳ ಫಲಿತಾಂಶ ಕೂಡ ಇಲ್ಲಿ ಮುಖ್ಯವಾಗುತ್ತದೆ.
4 / 7
ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇನ್ನೂ 2 ಪಂದ್ಯಗಳಿವೆ. ಈ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಕೆಎಲ್ ರಾಹುಲ್ ಪಡೆ 16 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಖಚಿತ. ಹೀಗಾಗಿ ಎಲ್ಎಸ್ಜಿ ತಂಡವು ಮುಂದಿನ 2 ಪಂದ್ಯಗಳಲ್ಲೂ ಸೋಲನುಭವಿಸಬೇಕು. ಅಥವಾ ಒಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಜಯ ಸಾಧಿಸಬೇಕು.
5 / 7
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಂದು ಪಂದ್ಯವಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಸಾಧಾರಣ ಗೆಲುವು ಸಾಧಿಸಬೇಕು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದರೆ ಉತ್ತಮ ನೆಟ್ ರನ್ ರೇಟ್ನೊಂದಿಗೆ ಒಟ್ಟು 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.
6 / 7
ಇನ್ನು ಗುಜರಾತ್ ಟೈಟಾನ್ಸ್ ತಂಡವು 12 ಪಂದ್ಯಗಳಿಂದ ಒಟ್ಟು 10 ಅಂಕಗಳನ್ನು ಕಲೆಹಾಕಿದೆ. ಮುಂದಿನ 2 ಮ್ಯಾಚ್ಗಳಲ್ಲಿ ಗುಜರಾತ್ ತಂಡವು ಅಮೋಘ ಗೆಲುವು ಸಾಧಿಸಿದರೆ 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಹೊಂದಿದೆ. ಹೀಗಾಗಿ ಜಿಟಿ ತಂಡದ ಒಂದು ಸೋಲನ್ನು ಆರ್ಸಿಬಿ ಎದುರು ನೋಡಲಿದೆ.
7 / 7
ಈ ಸೋಲು-ಗೆಲುವುಗಳ ಲೆಕ್ಕಾಚಾರಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಬೇಕು. ಈ ಮೂಲಕ ಆರ್ಸಿಬಿ ಪ್ಲೇಆಫ್ ಹಂತಕ್ಕೇರುವುದನ್ನು ಎದುರು ನೋಡುತ್ತಿದೆ. ಹೀಗಾಗಿ ಸಿಎಸ್ಕೆ-ಆರ್ಸಿಬಿ ನಡುವಣ ಅಂತಿಮ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.