IPL 2024: ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲಿದೆ RCB
TV9 Web | Updated By: ಝಾಹಿರ್ ಯೂಸುಫ್
Updated on:
May 02, 2024 | 1:52 PM
IPL 2024 RCB vs GT: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಆರ್ಸಿಬಿ ಇದುವರೆಗೆ 10 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಮೂರು ಮ್ಯಾಚ್ಗಳಲ್ಲಿ ಮಾತ್ರ. ಇದೀಗ ತನ್ನ 11ನೇ ಪಂದ್ಯದಲ್ಲಿ ಆರ್ಸಿಬಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಜಿಟಿ ವಿರುದ್ಧ ಜಯ ಸಾಧಿಸಿದ್ದ ಆರ್ಸಿಬಿ ಈ ಬಾರಿ ಕೂಡ ಗೆಲ್ಲುವ ಫೇವರೇಟ್ ತಂಡವೆನಿಸಿಕೊಂಡಿದೆ.
1 / 14
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮೇ 5 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಫಾಫ್ ಪಡೆ ಗೆದ್ದರೆ ಪ್ಲೇಆಫ್ ಆಸೆ ಜೀವಂತವಿರಲಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್ಸಿಬಿ ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲಿದೆ.
2 / 14
ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಆಡಿದ ಆಟಗಾರರೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಣಕ್ಕಿಳಿಯಲಿದ್ದಾರೆ ಎನ್ನಬಹುದು. ಏಕೆಂದರೆ ಬೆಂಗಳೂರು ಪಿಚ್ ಬ್ಯಾಟರ್ಗಳ ಪಾಲಿಗೆ ಸ್ವರ್ಗ. ಇತ್ತ ಆರ್ಸಿಬಿ ಬೌಲರ್ಗಳು ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ.
3 / 14
ಇದೇ ಕಾರಣದಿಂದಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಲಾಕಿ ಫರ್ಗುಸನ್ ಹಾಗೂ ರೀಸ್ ಟೋಪ್ಲಿಯಂತಹ ಬೌಲರ್ಗಳನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಟ್ಟಿದ್ದರು. ಅಲ್ಲದೆ ಕ್ಯಾಮರೋನ್ ಗ್ರೀನ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ಗೆ ಚಾನ್ಸ್ ನೀಡಿದ್ದರು. ಇದೇ ರಣತಂತ್ರದೊಂದಿಗೆ ಆರ್ಸಿಬಿ ಮುಂದಿನ ಪಂದ್ಯದಲ್ಲೂ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ...
4 / 14
1- ಫಾಫ್ ಡುಪ್ಲೆಸಿಸ್: ಈ ಬಾರಿಯ ಐಪಿಎಲ್ನಲ್ಲಿ 10 ಇನಿಂಗ್ಸ್ ಆಡಿರುವ ಫಾಫ್ ಡುಪ್ಲೆಸಿಸ್ 2 ಅರ್ಧಶತಕಗಳೊಂದಿಗೆ ಒಟ್ಟು 288 ರನ್ ಕಲೆಹಾಕಿದ್ದಾರೆ. ಅಲ್ಲದೆ ಆರ್ಸಿಬಿ ತಂಡದ ನಾಯಕರಾಗಿರುವ ಕಾರಣ ಅವರು ಮುಂದಿನ ಪಂದ್ಯದಲ್ಲೂ ಕಣಕ್ಕಿಳಿಯುವುದು ಖಚಿತ.
5 / 14
2- ವಿರಾಟ್ ಕೊಹ್ಲಿ: ಭರ್ಜರಿ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ಈವರೆಗೆ ಆಡಿದ 10 ಇನಿಂಗ್ಸ್ಗಳಿಂದ ಒಟ್ಟು 500 ರನ್ ಕಲೆಹಾಕಿದ್ದಾರೆ. ಈ ವೇಳೆ 4 ಅರ್ಧಶತಕ ಹಾಗೂ 1 ಶತಕ ಸಿಡಿಸಿ ಮಿಂಚಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಕೂಡ ಕೊಹ್ಲಿಯೇ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.
6 / 14
3- ವಿಲ್ ಜಾಕ್ಸ್: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವಿಲ್ ಜಾಕ್ಸ್ ಕೇವಲ 41 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದರು. ಹೀಗಾಗಿ ಮುಂದಿನ ಪಂದ್ಯದಲ್ಲೂ ಜಾಕ್ಸ್ 3ನೇ ಕ್ರಮಾಂಕದಲ್ಲೇ ಆಡಲಿದ್ದಾರೆ ಎನ್ನಬಹುದು.
7 / 14
4- ರಜತ್ ಪಾಟಿದಾರ್: ಈ ಬಾರಿ ಆರ್ಸಿಬಿ ಆಡಿದ 10 ಪಂದ್ಯಗಳಲ್ಲೂ ಕಣಕ್ಕಿಳಿದಿರುವ ರಜತ್ ಪಾಟಿದಾರ್ 3 ಅರ್ಧಶತಕಗಳೊಂದಿಗೆ ಒಟ್ಟು 211 ರನ್ ಕಲೆಹಾಕಿದ್ದಾರೆ. ಹೀಗಾಗಿ 4ನೇ ಕ್ರಮಾಂಕದಲ್ಲಿ ಪಾಟಿದಾರ್ ಅವರನ್ನು ಎದುರು ನೋಡಬಹುದು.
8 / 14
5- ಗ್ಲೆನ್ ಮ್ಯಾಕ್ಸ್ವೆಲ್: 7 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಗ್ಲೆನ್ ಮ್ಯಾಕ್ಸ್ವೆಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಈವರೆಗೆ ಕೇವಲ 32 ರನ್ ಮಾತ್ರ ಕಲೆಹಾಕಿರುವ ಮ್ಯಾಕ್ಸಿ, ಬೌಲಿಂಗ್ನಲ್ಲಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲೂ ಆಲ್ರೌಂಡರ್ ಆಗಿ ಮ್ಯಾಕ್ಸ್ವೆಲ್ ಕಣಕ್ಕಿಳಿಯುವುದು ಖಚಿತ ಎನ್ನಬಹುದು.
9 / 14
6- ಕ್ಯಾಮರೋನ್ ಗ್ರೀನ್: 8 ಪಂದ್ಯಗಳನ್ನಾಡಿರುವ ಕ್ಯಾಮರೋನ್ ಗ್ರೀನ್ 111 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಇದಾಗ್ಯೂ ಬೌಲಿಂಗ್ನಲ್ಲಿ 6 ವಿಕೆಟ್ ಪಡೆದಿರುವ ಕಾರಣ ಆಲ್ರೌಂಡರ್ ಆಗಿ ಗ್ರೀನ್ ಅವರನ್ನೇ ಆರ್ಸಿಬಿ ಕಣಕ್ಕಿಳಿಸಲಿದೆ.
10 / 14
7- ದಿನೇಶ್ ಕಾರ್ತಿಕ್: ಆರ್ಸಿಬಿ ತಂಡದ ಫಿನಿಶರ್ ಪಾತ್ರದಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ. ಡಿಕೆ ಈವರೆಗೆ 262 ರನ್ ಕಲೆಹಾಕಿದ್ದು, ಈ ವೇಳೆ 2 ಅರ್ಧಶತಕಗಳನ್ನೂ ಸಹ ಬಾರಿಸಿದ್ದಾರೆ.
11 / 14
8- ಸ್ವಪ್ನಿಲ್ ಸಿಂಗ್: ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸ್ಪಿನ್ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ 3 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಸ್ವಪ್ನಿಲ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.
12 / 14
9- ಕರ್ಣ್ ಶರ್ಮಾ: ಅನುಭವಿ ಸ್ಪಿನ್ನರ್ ಕರ್ಣ್ ಶರ್ಮಾ ಈ ಬಾರಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ. ಈ ವೇಳೆ 3 ವಿಕೆಟ್ಗಳನ್ನು ಕಬಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲೆ ಎಂಬುದನ್ನು ನಿರೂಪಿಸಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಕರ್ಣ್ ಶರ್ಮಾ ಕೂಡ ಕಾಣಿಸಿಕೊಳ್ಳಲಿದ್ದಾರೆ.
13 / 14
10- ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಕಳೆದ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 34 ರನ್ ನೀಡಿ 1 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಆರ್ಸಿಬಿ ಪರ ಸಿರಾಜ್ ಬೌಲಿಂಗ್ ಆರಂಭಿಸುವುದನ್ನು ಎದುರು ನೋಡಬಹುದು.
14 / 14
11- ಯಶ್ ದಯಾಳ್: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿರುವ ಯಶ್ ದಯಾಳ್ ಈವರೆಗೆ ಒಟ್ಟು 8 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಎಡಗೈ ವೇಗಿ ಕಣಕ್ಕಿಳಿಯಲಿದ್ದಾರೆ.