
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಜೂನ್ 1 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನದಲ್ಲಿ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

2022ರ ಡಿಸೆಂಬರ್ನಲ್ಲಿ ನಡೆದ ಕಾರು ಅಪಘಾತದ ಬಳಿಕ ರಿಷಭ್ ಪಂತ್ ಒಂದು ವರ್ಷದ ಮೈದಾನದಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್ ಮೂಲಕ ಕಂಬ್ಯಾಕ್ ಮಾಡಿರುವ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾರೆ.

ಈವರೆಗೆ ಆಡಿರುವ 9 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿರುವ ರಿಷಭ್ ಪಂತ್ 161ರ ಸ್ಟ್ರೈಕ್ ರೇಟ್ನಲ್ಲಿ 342 ರನ್ ಕಲೆಹಾಕಿದ್ದಾರೆ. ಈ ವೇಳೆ ಮೂರು ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ.

ಇತ್ತ ಭರ್ಜರಿ ಪ್ರದರ್ಶನದೊಂದಿಗೆ ರಿಷಭ್ ಪಂತ್ ಐಪಿಎಲ್ 2024ರ ರನ್ ಸರದಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ 2 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್ಗೆ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಆಯ್ಕೆ ಖಚಿತ ಎಂದೇ ಹೇಳಬಹುದು.

ಇತ್ತ ರಿಷಭ್ ಪಂತ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿರುವುದರಿಂದ, ಕೆಎಲ್ ರಾಹುಲ್, ಧ್ರುವ್ ಜುರೇಲ್ ಹಾಗೂ ಜಿತೇಶ್ ಶರ್ಮಾಗೆ ಟಿ20 ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗುವುದು ಅನುಮಾನ. ಇನ್ನು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ನಡುವೆ 2ನೇ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿ ಇದ್ದು, ಈ ಇಬ್ಬರಲ್ಲಿ ಯಾರು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೊ ಅವರಿಗೆ 2ನೆ ವಿಕೆಟ್ ಕೀಪರ್ ಆಗಿ ಭಾರತ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ.