IPL 2024: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಮೋಹಿತ್ ಶರ್ಮಾ
IPL 2024: ಐಪಿಎಲ್ 2024 ರ 40ನೇ ಪಂದ್ಯದಲ್ಲಿ 73 ರನ್ಗಳನ್ನು ನೀಡುವ ಮೂಲಕ ಹಿರಿಯ ವೇಗಿ ಮೋಹಿತ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಸಹ 6 ವರ್ಷಗಳ ಹಿಂದೆ ಸನ್ರೈಸರ್ಸ್ ಹೈದರಾಬಾದ್ ವೇಗಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಿರ್ಮಿಸಿದ್ದ ಅತ್ಯಂತ ಕಳಪೆ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Apr 25, 2024 | 7:22 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿ ಮೋಹಿತ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ ಬರೋಬ್ಬರಿ 73 ರನ್ಗಳನ್ನು ನೀಡುವ ಮೂಲಕ ಮೋಹಿತ್ ಈ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಐಪಿಎಲ್ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎಂಬ ದಾಖಲೆ ಬಾಸಿಲ್ ಥಂಪಿ ಹೆಸರಿನಲ್ಲಿತ್ತು. 2018 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಬಾಸಿಲ್ 4 ಓವರ್ಗಳಲ್ಲಿ 70 ರನ್ ನೀಡಿ ಈ ಹೀನಾಯ ದಾಖಲೆ ನಿರ್ಮಿಸಿದ್ದರು.

ಇದೀಗ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವೇಗಿ ಮೋಹಿತ್ ಶರ್ಮಾ 4 ಓವರ್ಗಳಲ್ಲಿ 73 ರನ್ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ 4 ಓವರ್ ಸ್ಪೆಲ್ನಲ್ಲಿ ಅತೀ ಹೆಚ್ಚು ರನ್ ಹೊಡೆಸಿಕೊಂಡ ಐಪಿಎಲ್ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ (88) ಹಾಗೂ ಅಕ್ಷರ್ ಪಟೇಲ್ (66) ಅರ್ಧಶತಕ ಬಾರಿಸಿ ಮಿಂಚಿದರು. ಈ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಸಾಯಿ ಸುದರ್ಶನ್ (65) ಹಾಗೂ ಡೇವಿಡ್ ಮಿಲ್ಲರ್ (55) ಅವರ ಸ್ಪೋಟಕ ಅರ್ಧಶತಕದೊಂದಿಗೆ ಗುಜರಾತ್ 19 ಓವರ್ಗಳಲ್ಲಿ 206 ರನ್ ಕಲೆಹಾಕಿತು. ಕೊನೆಯ ಓವರ್ನಲ್ಲಿ 19 ರನ್ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ 14 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೇವಲ 4 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
