Rohit Sharma: ಪಂಜಾಬ್ ಕಿಂಗ್ಸ್ ನಾಯಕರಾಗ್ತಾರಾ ರೋಹಿತ್ ಶರ್ಮಾ?
TV9 Web | Updated By: ಝಾಹಿರ್ ಯೂಸುಫ್
Updated on:
Apr 20, 2024 | 12:10 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಗಾಗಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ಬಹುತೇಕ ಪ್ಲೇಯರ್ಸ್ ಅನ್ನು ಬಿಡುಗಡೆ ಮಾಡಬೇಕಾಗುತ್ತದೆ. ಅಂದರೆ ಐಪಿಎಲ್ ಮೆಗಾ ಆಕ್ಷನ್ ನಿಯಮದ ಪ್ರಕಾರ ಕೇವಲ 4 ಆಟಗಾರರನ್ನು ಮಾತ್ರ ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ಇರಲಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರ ಮುಕ್ತಾಯಕ್ಕೂ ಮುನ್ನವೇ ಐಪಿಎಲ್ ಮೆಗಾ ಹರಾಜು ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ರೋಹಿತ್ ಶರ್ಮಾ (Rohit Sharma) ಪಂಜಾಬ್ ಕಿಂಗ್ಸ್ (Punjab Kings) ಪರ ಆಡಲಿದ್ದಾರಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಕೆಲ ದಿನಗಳ ಹಿಂದೆ ಹರಿದಾಡಿದ ಸುದ್ದಿಗಳು.
2 / 6
ಈ ಬಾರಿಯ ಐಪಿಎಲ್ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಕೇವಲ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಮುಂಬೈ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಹಿಟ್ಮ್ಯಾನ್ ಅವರನ್ನು ಈ ಬಾರಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅಲ್ಲದೆ ಅವರ ಬದಲಿಗೆ ಇದೀಗ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
3 / 6
ಹೀಗಾಗಿಯೇ ಮುಂದಿನ ವರ್ಷ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಆಡಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಸುದ್ದಿಗಳ ನಡುವೆ ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಹಿಟ್ಮ್ಯಾನ್ ಮುನ್ನಡೆಸಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗಿದೆ.
4 / 6
ಹೀಗೆ ಸುದ್ದಿ ವೈರಲ್ ಆಗಲು ಮುಖ್ಯ ಕಾರಣ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಝಿಂಟಾ ರೋಹಿತ್ ಶರ್ಮಾ ಜೊತೆ ಮಾತನಾಡಿದ್ದು. ಇದರ ಬೆನ್ನಲ್ಲೇ ಹಿಟ್ಮ್ಯಾನ್ ಮುಂದಿನ ವರ್ಷ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಮಹತ್ವ ಪಡೆದುಕೊಂಡಿದೆ.
5 / 6
ಇದೀಗ ಈ ವದಂತಿಗಳ ಬಗ್ಗೆ ಖುದ್ದು ಪ್ರೀತಿ ಝಿಂಟಾ ಪ್ರತಿಕ್ರಿಯಿಸಿದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಆಧಾರರಹಿತ, ಸುಳ್ಳು ಸುದ್ದಿಗಳು. ನಾನು ರೋಹಿತ್ ಶರ್ಮಾ ಅವರನ್ನು ಬಹಳ ಗೌರವದಿಂದ ಕಾಣುತ್ತೇನೆ. ಅವರ ದೊಡ್ಡ ಅಭಿಮಾನಿ ನಾನು. ಆದರೆ ಅವರ ಜೊತೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಬರುವ ಬಗ್ಗೆಯಾಗಲಿ ನಾನು ಚರ್ಚಿಸಿಲ್ಲ ಅಥವಾ ಅಂತಹ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಅಂತಹ ಸುದ್ದಿಗಳನ್ನು ನಂಬಬೇಡಿ ಎಂದು ಪ್ರೀತಿ ಝಿಂಟಾ ತಿಳಿಸಿದ್ದಾರೆ.
6 / 6
ಇದಾಗ್ಯೂ ಐಪಿಎಲ್ 2025 ಕ್ಕಾಗಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದರೆ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಹಿಟ್ಮ್ಯಾನ್ ಖರೀದಿಗಾಗಿ ಒಂದಷ್ಟು ಫ್ರಾಂಚೈಸಿಗಳು ಪ್ರಯತ್ನಿಸುವುದಂತು ದಿಟ. ಹೀಗೆ ರೋಹಿತ್ ಶರ್ಮಾ ಖರೀದಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ಪ್ರಯತ್ನ ನಡೆಸುವುದು ಖಚಿತ ಎಂದೇ ಎನ್ನಬಹುದು.