
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಎಕ್ಸ್ ಖಾತೆಯಲ್ಲಿ ಮಿಂಚಿನ ಫೋಟೋವೊಂದನ್ನು ಹಂಚಿಕೊಳ್ಳಲಾಗಿತ್ತು. ಸವಾಯ್ ಮಾನ್ಸಿಂಗ್ ಮೈದಾನದಲ್ಲಿ ಆರ್ಸಿಬಿ ಆಟಗಾರರು ಅಭ್ಯಾಸ ನಡೆಸುತ್ತಿದ್ದ ವೇಳೆ ಕೋಚ್ ಆ್ಯಂಡಿ ಫ್ಲವರ್ ಈ ಫೋಟೋವನ್ನು ಕ್ಲಿಕ್ಕಿಸಿದ್ದರು. ಇದರ ಬೆನ್ನಲ್ಲೇ ಈ ಪಂದ್ಯಕ್ಕೆ ವರುಣ ಭೀತಿ ಶುರುವಾಗಿತ್ತು.

ಆದರೆ ಅಕ್ಯುವೆದರ್ ಮಾಹಿತಿ ಪ್ರಕಾರ, ಜೈಪುರದಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿಲ್ಲ. ಅಲ್ಲದೆ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಸಂಜೆ ವೇಳೆ ಆರ್ದ್ರತೆಯು ಶೇ. 20 ರಷ್ಟು ಇರಲಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವುದಿಲ್ಲ.

ಇದಾಗ್ಯೂ ನಿನ್ನೆಯಂತೆ ಇಂದು ಸಹ ಗುಡುಗಿನೊಂದಿಗೆ ಮಿಂಚು ಕಾಣಿಸಿಕೊಳ್ಳಬಹುದು. ಆದರೆ ಪಂದ್ಯದ ವೇಳೆ ಮಳೆ ಸುರಿಯುವ ಯಾವುದೇ ಸಾಧ್ಯತೆಯಿಲ್ಲ ಎಂದು ಅಕ್ಯುವೆದರ್ ಹವಾಮಾನ ಮಾಹಿತಿ ನೀಡಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯವು 20+20 ಓವರ್ಗಳಲ್ಲೇ ನಡೆಯುವುದು ಖಚಿತ.

ಆರ್ಸಿಬಿ ಮತ್ತು ಆರ್ಆರ್ ತಂಡಗಳು ಇದುವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಮೂರು ಪಂದ್ಯಗಳು ಫಲಿತಾಂಶರಹಿತವಾಗಿತ್ತು. ಅಂದರೆ ಇಲ್ಲಿ ಉಭಯ ತಂಡಗಳು ಒಂದಾರ್ಥದಲ್ಲಿ ಸಮಬಲ ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲೂ ರೋಚಕ ಪೈಪೋಟಿ ನಿರೀಕ್ಷಿಸಬಹುದು.