ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 56ನೇ ಪಂದ್ಯದಲ್ಲಿ ಟಿವಿ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು. 222 ರನ್ಗಳ ಕಠಿಣ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ತಂಡದ ಪರ ನಾಯಕ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
45 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 86 ರನ್ ಬಾರಿಸಿದ್ದ ಸ್ಯಾಮ್ಸನ್ ವೇಗಿ ಮುಖೇಶ್ ಕುಮಾರ್ ಎಸೆದ 16ನೇ ಓವರ್ನ 4ನೇ ಎಸೆತದಲ್ಲಿ ಸಿಕ್ಸ್ ಸಿಡಿಸಲು ಯತ್ನಿಸಿದ್ದರು. ಆದರೆ ಚೆಂಡು ನೇರವಾಗಿ ಲಾಂಗ್ ಆನ್ನಲ್ಲಿ ಫೀಲ್ಡ್ನಲ್ಲಿದ್ದ ಶಾಯ್ ಹೋಪ್ ಕೈ ಸೇರಿತು. ಆದರೆ ಚೆಂಡು ಹಿಡಿದ ಬಳಿಕ ಚಲಿಸಿದ ಹೋಪ್ ಬೌಂಡರಿ ಲೈನ್ ದಾಟಿದ್ದಾರಾ ಎಂದು ಪರಿಶೀಲಿಸಲು ಫೀಲ್ಡ್ ಅಂಪೈರ್ ಟಿವಿ ಅಂಪೈರ್ನ ಮೊರೆ ಹೋಗಿದ್ದರು.
ರೀಪ್ಲೇ ಪರಿಶೀಲಿಸಿದ ಟಿವಿ ಅಂಪೈರ್ ಸಂಜು ಸ್ಯಾಮ್ಸನ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಮರು ಪರಿಶೀಲನೆ ವೇಳೆ ಶಾಯ್ ಹೋಪ್ ಅವರ ಶೂಸ್ ಬೌಂಡರಿ ಲೈನ್ಗೆ ತಾಗಿದಂತೆ ಗೋಚರಿಸಿತ್ತು. ಇತ್ತ ಸಂಜು ಸ್ಯಾಮ್ಸನ್ ಕೂಡ ಈ ಬಗ್ಗೆ ಫೀಲ್ಡ್ ಅಂಪೈರ್ ಜೊತೆ ವಾದಕ್ಕಿಳಿದರು. ಅಲ್ಲದೆ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದರು.
ಆದರೆ ಟಿವಿ ಅಂಪೈರ್ ನೀಡಿದ ತೀರ್ಪೇ ಅಂತಿಮವೆಂದು, ಡಿಆರ್ಎಸ್ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಸ್ಯಾಮ್ಸನ್ ಅವರನ್ನು ಫೀಲ್ಡ್ ಅಂಪೈರ್ ಹೊರ ಕಳುಹಿಸಿದ್ದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಔಟಾ ಅಥವಾ ನಾಔಟಾ ಎಂಬ ಚರ್ಚೆಗಳು ಶುರುವಾಗಿದೆ.
ಇಲ್ಲಿ ಕೆಲವರ ವಾದದ ಪ್ರಕಾರ ಶಾಯ್ ಹೋಪ್ ಅವರ ಬಲ ಕಾಲಿನ ಶೂಸ್ ಬೌಂಡರಿ ಲೈನ್ಗೆ ತಾಗಿದ್ದು, ಹೀಗಾಗಿ ಅದು ಸಿಕ್ಸ್. ಮತ್ತೆ ಕೆಲವರ ವಾದ ಅದು ಔಟ್ ಎಂಬುದಾಗಿದೆ.
ಆದರೆ ಶಾಯ್ ಹೋಪ್ ಚೆಂಡನ್ನು ಹಿಡಿದು ಮುಂದಕ್ಕೆ ಸಾಗುವಾಗ ಬೌಂಡರಿ ಲೈನ್ ಮತ್ತು ಶೂಸ್ ನಡುವೆ ಕೂದಲೆಳೆಯ ಅಂತರವಿತ್ತು ಎಂಬುದಕ್ಕೆ ಈ ಫೋಟೋ ಸಾಕ್ಷಿ. ಅಂದರೆ ಇಲ್ಲಿ ಬೌಂಡರಿ ಲೈನ್ ರೋಪ್ನ ನೆರಳಿನ ಭಾಗದಲ್ಲಿ ಹೋಪ್ ಅವರ ಶೂಸ್ ಇರುವುದು ಕಾಣಬಹುದು. ಹೀಗಾಗಿಯೇ ಟಿವಿ ಅಂಪೈರ್ ಇದನ್ನು ಔಟ್ ಎಂದು ತೀರ್ಪು ನೀಡಿದ್ದರು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕುಮಾರ ಸಂಗಾಕ್ಕರ ಮೂರನೇ ಅಂಪೈರ್ ಜೊತೆ ಈ ಬಗ್ಗೆ ಯಾವುದೇ ವಾದ ಮಾಡಿರಲಿಲ್ಲ ಎಂಬುದು. ಸಾಮಾನ್ಯವಾಗಿ ಆರ್ಆರ್ ತಂಡದ ಕೋಚ್ ಪ್ರತಿಯೊಂದು ತೀರ್ಪಿನ ಬಗ್ಗೆಯೂ ಬೌಂಡರಿ ಲೈನ್ ಬಳಿ ನಿಂತಿರುವ ಮೂರನೇ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿರುತ್ತಾರೆ. ಆದರೆ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಔಟ್ ವಿಡಿಯೋವನ್ನು ಹತ್ತಿರದಿಂದ ಗಮನಿಸಿದ್ದ ಕುಮಾರ ಸಂಗಾಕ್ಕರ ಈ ಬಗ್ಗೆ ಯಾವುದೇ ಆಕ್ರೋಶವನ್ನು ಹೊರಹಾಕಿರಲಿಲ್ಲ.
ಅಂದರೆ ಇಲ್ಲಿ ಶಾಯ್ ಹೋಪ್ ಕೂದಲೆಳೆಯ ಅಂತರದಿಂದ ಚೆಂಡನ್ನು ಹಿಡಿದಿರುವುದು ಸ್ಪಷ್ಟ. ಇದಕ್ಕೆ ಸಾಕ್ಷಿಯಾಗಿ ಜಿಯೋ ಸಿನಿಮಾದವರು ಬೌಂಡರಿ ಲೈನ್ ಬಳಿಯಿದ್ದ ಶಾಯ್ ಹೋಪ್ ಅವರ ಶೂಸ್ ಅನ್ನು ಝೂಮ್ ಮಾಡಿ ಕೂಡ ತೋರಿಸಿದ್ದರು. ಇಲ್ಲಿಯೂ ಬೌಂಡರಿ ಲೈನ್ ಮತ್ತು ಶೂಸ್ ನಡುವೆ ಕೂದಲೆಳೆಯ ಅಂತರವಿರುವುದು ಕಂಡು ಬರುತ್ತದೆ. ಹೀಗಾಗಿಯೇ ಇದನ್ನು ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಇನ್ನು ಈ ತೀರ್ಪು ವಿವಾದವಾಗಲು ಮುಖ್ಯ ಕಾರಣ, ಟಿವಿ ಅಂಪೈರ್ ದಿಢೀರ್ ತೀರ್ಪು ನೀಡಿರುವುದು. ಅಂದರೆ ನಾನಾ ರೀತಿಯ ಆ್ಯಂಗಲ್ನಲ್ಲಿ ಪರಿಶೀಲಿಸದೇ ಬೇಗನೆ ಔಟ್ ನೀಡಿದ್ದರಿಂದ ಇತ್ತ ಟಿವಿಯಲ್ಲಿ ರೀಪ್ಲೆ ವೀಕ್ಷಿಸುತ್ತಿದ್ದ ಪ್ರೇಕ್ಷರಿಗೂ ಸ್ಪಷ್ಟತೆ ಕಾಣಲಿಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಔಟಾ ಅಥವಾ ನಾಟೌಟಾ ಎಂಬ ಗೊಂದಲ ಏರ್ಪಟ್ಟಿತ್ತು. ಒಂದು ವೇಳೆ ಟಿವಿ ರೀಪ್ಲೆನಲ್ಲಿ ಬೌಂಡರಿ ಲೈನ್ ಮತ್ತು ಶಾಯ್ ಹೋಪ್ ಅವರ ಶೂಸ್ ನಡುವಣ ಅಂತರವನ್ನು ಝೂಮ್ ಮಾಡಿ ತೋರಿಸಿದ್ದರೆ ಈ ಗೊಂದಲ ಏರ್ಪಡುತ್ತಿರಲಿಲ್ಲ.
Published On - 7:40 am, Wed, 8 May 24