
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 57ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಅಡಿಯನ್ನುಂಟು ಮಾಡುವ ಸಾಧ್ಯತೆಯಿದೆ.

ಏಕೆಂದರೆ ಮಂಗಳವಾರ ಸಂಜೆಯಿಂದ ಹೈದರಾಬಾದ್ನಾದ್ಯಂತ ಭಾರೀ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ರಾಜೀವ್ ಗಾಂಧಿ ಮೈದಾನದಲ್ಲಿ ನೀರು ನಿಂತಿದೆ. ಈ ಮಳೆಯು ರಾತ್ರಿವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಾಗೆಯೇ ನಾಳೆ ಸಂಜೆಯಿಂದ ಮತ್ತೆ ಮಳೆಯಾಗಲಿದ್ದು, ರಾತ್ರಿ ವೇಳೆ ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯಕ್ಕೆ ವರುಣ ಅವಕೃಪೆ ತೋರುವ ಸಾಧ್ಯತೆ ಹೆಚ್ಚಿದೆ.

ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ತುಂಬಾ ಮಹತ್ವದ್ದು. ಏಕೆಂದರೆ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿರುವ ಎಸ್ಆರ್ಹೆಚ್ ತಂಡವು ನೇರವಾಗಿ ಪ್ಲೇಆಫ್ ಪ್ರವೇಶಿಸಬೇಕಿದ್ದರೆ ಮುಂದಿನ ಮೂರು ಪಂದ್ಯಗಳಲ್ಲೂ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದೆ.

ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮಲೇಬೇಕು. ಅತ್ತ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಕೂಡ ಎಸ್ಆರ್ಹೆಚ್ ವಿರುದ್ಧ ಗೆದ್ದರೆ ಮಾತ್ರ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ.

ಅಂದರೆ ಪ್ಲೇಆಫ್ ರೇಸ್ನಲ್ಲಿ ಮುಂದಿನ ಹಂತಕ್ಕೆ ಹೋಗಲು ಉಭಯ ತಂಡಗಳಿಗೂ ನಾಳಿನ (ಮೇ 8) ಪಂದ್ಯದಲ್ಲಿ ಗೆಲ್ಲಲೇಬೇಕು. ಇದರ ನಡುವೆ ಹೈದರಾಬಾದ್ನಾದ್ಯಂತ ಭಾರೀ ಮಳೆಯಾಗುತ್ತಿರುವುದು ಇದೀಗ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಚಿಂತೆಯನ್ನು ಹೆಚ್ಚಿಸಿದೆ.