ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಮದಗಜಗಳ ಕಾಳಗಕ್ಕೆ ವೇದಿಕೆ ಸಿದ್ಧವಾಗಿದೆ. ಗುರುವಾರ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 41ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.
ವಿಶೇಷ ಎಂದರೆ ಮೊದಲಾರ್ಧದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 287 ರನ್ ಬಾರಿಸುವ ಮೂಲಕ ಎಸ್ಆರ್ಹೆಚ್ ಹೊಸ ಇತಿಹಾಸ ಬರೆದಿತ್ತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಬ್ಯಾಟರ್ಗಳು ಕೂಡ 262 ರನ್ ಬಾರಿಸಿ ಅಬ್ಬರಿಸಿದ್ದರು. ಇದೀಗ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿದೆ.
ಕಳೆದ ಪಂದ್ಯದಲ್ಲಿ ಉಭಯ ತಂಡಗಳು ಸೇರಿ ಒಟ್ಟು 549 ರನ್ ಕಲೆಹಾಕಿರುವ ಕಾರಣ ಈ ಪಂದ್ಯದಲ್ಲೂ ರನ್ ಮಳೆಯನ್ನು ನಿರೀಕ್ಷಿಸಬಹುದು. ಅದರಲ್ಲೂ ಆರ್ಸಿಬಿ ವಿರುದ್ಧ ಎಸ್ಆರ್ಹೆಚ್ ಕಳೆದ ಮ್ಯಾಚ್ನಲ್ಲಿ ಬರೋಬ್ಬರಿ 22 ಸಿಕ್ಸ್ಗಳನ್ನು ಸಿಡಿಸಿದ್ದರು ಎಂಬುದು ವಿಶೇಷ. ಅಲ್ಲದೆ ಈ ಪಂದ್ಯದಲ್ಲಿ ಒಟ್ಟು 81 ಬೌಂಡರಿಗಳು ಮೂಡಿಬಂದಿದ್ದವು.
ಇದೀಗ ಬ್ಯಾಟರ್ಗಳ ಸ್ವರ್ಗ ಎನಿಸಿಕೊಂಡಿರುವ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡವು ಎಸ್ಆರ್ಹೆಚ್ ತಂಡವನ್ನು ಎದುರಿಸಲಿದೆ. ಹೀಗಾಗಿ ಈ ಪಂದ್ಯದಲ್ಲೂ ಸಿಕ್ಸ್-ಫೋರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಎಸ್ಆರ್ಹೆಚ್ ತಂಡವು 13 ಬಾರಿ ಜಯ ಸಾಧಿಸಿದೆ. ಇನ್ನು ಆರ್ಸಿಬಿ ಗೆದ್ದಿರುವುದು ಕೇವಲ 10 ಪಂದ್ಯಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ಇಲ್ಲಿ ಮೇಲ್ನೋಟಕ್ಕೆ ಎಸ್ಆರ್ಹೆಚ್ ತಂಡ ಬಲಿಷ್ಠವಾಗಿ ಕಂಡು ಬಂದರೂ, ಕಳೆದ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಪೈಪೋಟಿ ನೀಡಿತ್ತು. ಹೀಗಾಗಿ ಈ ಪಂದ್ಯದಲ್ಲೂ ಉಭಯ ತಂಡಗಳಿಂದ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.