
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಇದುವರೆಗೆ ಆಡಲಾದ 32 ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ 287 ರನ್ ಬಾರಿಸಿ ಹೊಸ ದಾಖಲೆ ಬರೆದರೆ, ಗುಜರಾತ್ ಟೈಟಾನ್ಸ್ (89 ರನ್ಸ್) ತಂಡವು ಇದೇ ಮೊದಲ ಬಾರಿ 100 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.

ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 224 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಇದಾಗ್ಯೂ ಇದುವರೆಗೆ ಯಾವುದೇ ಪಂದ್ಯವು ಸೂಪರ್ ಓವರ್ನತ್ತ ಸಾಗಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಸೂಪರ್ ಓವರ್ ಪೈಪೋಟಿ ಕಂಡು ಬಂದು ಮೂರು ವರ್ಷಗಳೇ ಕಳೆದಿದೆ.

ಕೊನೆಯ ಬಾರಿ ಐಪಿಎಲ್ನಲ್ಲಿ ಸೂಪರ್ ಓವರ್ ಕಂಡು ಬಂದಿದ್ದು 2021 ರಲ್ಲಿ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಸೂಪರ್ ಓವರ್ ಪೈಪೋಟಿ ಬಳಿಕ ಯಾವುದೇ ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿಲ್ಲ. ಇದರ ನಡುವೆ 215 ಕ್ಕಿಂತ ಹೆಚ್ಚು ಪಂದ್ಯಗಳು ನಡೆದಿವೆ. ಆದರೆ 6 ಎಸೆತಗಳ ರಣರೋಚಕ ಪಂದ್ಯವನ್ನು ವೀಕ್ಷಿಸುವ ಅವಕಾಶ ಮಾತ್ರ ಅಭಿಮಾನಿಗಳಿಗೆ ದೊರೆತಿಲ್ಲ.

ಈ ಬಾರಿ ಕೂಡ ಹಲವು ಪಂದ್ಯಗಳು ಕೊನೆಯ ಎಸೆತದವರೆಗೆ ಸಾಗಿದರೂ ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿಲ್ಲ ಎಂಬುದು ವಿಶೇಷ. ಅದೇ ಐಪಿಎಲ್ 2020 ರಲ್ಲಿ 5 ಸೂಪರ್ ಓವರ್ ಪೈಪೋಟಿ ನಡೆದಿದ್ದವು. ಆದರೆ ಇದಾದ ಬಳಿಕ ಕೇವಲ ಒಮ್ಮೆ ಮಾತ್ರ 6 ಎಸೆತಗಳ ಪಂದ್ಯ ನಡೆದಿದೆ.

ಇದೀಗ ಐಪಿಎಲ್ 2024 ರ ಮೊದಲಾರ್ಧ ಮುಗಿದರೂ ಸೂಪರ್ ಫೈಟ್ ಮಾತ್ರ ಕಂಡು ಬಂದಿಲ್ಲ. ಹೀಗಾಗಿಯೇ ಸೂಪರ್ ಓವರ್ ಪೈಪೋಟಿಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಎದುರು ನೋಡುವಿಕೆ ಕಳೆದ ಮೂರು ಸೀಸನ್ಗಳಿಂದ ಚಾಲ್ತಿಯಲ್ಲಿದ್ದು, ಈ ಬಾರಿಯಾದರೂ ಸೂಪರ್ ಓವರ್ ಫೈಟ್ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆಯಾ ಕಾದು ನೋಡಬೇಕಿದೆ.