
ಐಪಿಎಲ್ (IPL 2024) ಸೀಸನ್ 17 ಗೆ ಸೂರ್ಯಕುಮಾರ್ ಯಾದವ್ (Suryakumar Yadav) ಎಂಟ್ರಿ ಕೊಟ್ಟಿದ್ದಾರೆ. ಕಳೆದ 2 ವಾರಗಳಿಂದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ನಲ್ಲಿದ್ದ ಸೂರ್ಯ, ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದ್ದಾರೆ. ಅಲ್ಲದೆ ಶುಕ್ರವಾರ ಮುಂಬೈ ಇಂಡಿಯನ್ಸ್ ಬಳಗವನ್ನು ಸೇರಿಕೊಂಡಿದ್ದಾರೆ.

ಇನ್ನು ಶುಕ್ರವಾರ ಮುಂಬೈ ಇಂಡಿಯನ್ಸ್ ಕ್ಯಾಂಪ್ ಸೇರಿರುವ ಸೂರ್ಯಕುಮಾರ್ ಅದೇ ದಿನ ಅಭ್ಯಾಸಕ್ಕೂ ಇಳಿದಿದ್ದರು. ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

ಅತ್ತ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರ ಆಗಮನ, ಹೊಸ ಬಲವನ್ನು ನೀಡಲಿದೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲೂ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಇದೀಗ ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಸೂರ್ಯಕುಮಾರ್ ಯಾದವ್ ಅವರ ಆಗಮನವು ಮುಂಬೈ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಇನ್ಮುಂದೆ ಬಿರುಸಿನ ಬ್ಯಾಟಿಂಗ್ ನಿರೀಕ್ಷಿಸಬಹುದು.

ಮುಂಬೈ ಇಂಡಿಯನ್ಸ್ ಪರ ಇದುವರೆಗೆ 85 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 2688 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 20 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ಪರ ಅತ್ಯಧಿಕ ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಸೂರ್ಯಕುಮಾರ್ ಯಾದವ್ ಅವರ ಎಂಟ್ರಿಯು ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರುವುದರಲ್ಲಿ ಅನುಮಾನವೇ ಇಲ್ಲ. ಅದರಂತೆ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯಲಿದೆಯಾ ಕಾದು ನೋಡಬೇಕಿದೆ.