
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿ 2 ವಾರಗಳಾಗುತ್ತಾ ಬರುತ್ತಿದೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಇನ್ನೂ ಸಹ ತಂಡವನ್ನು ಸೇರಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಫಿಟ್ನೆಸ್ ಸಮಸ್ಯೆ.

ಸೂರ್ಯಕುಮಾರ್ ಯಾದವ್ ಕಳೆದ ತಿಂಗಳು ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಗಾಯದಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಇನ್ನೂ ಸಹ ಸೂರ್ಯಕುಮಾರ್ ಯಾದವ್ಗೆ ನಿರಾಕ್ಷೇಪಣ ಪ್ರಮಾಣ ಪತ್ರ ಸಿಕ್ಕಿಲ್ಲ.

ಬಿಸಿಸಿಐ ನಿಯಮದ ಪ್ರಕಾರ, ಟೀಮ್ ಇಂಡಿಯಾ ಪರ ಆಡುವ ಆಟಗಾರರು ಐಪಿಎಲ್ಗೂ ಮುನ್ನ ಗಾಯಗೊಂಡಿದ್ದರೆ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲೇಬೇಕು. ಇದೀಗ ಸೂರ್ಯಕುಮಾರ್ ಎನ್ಸಿಎನಲ್ಲಿದ್ದು, ಅವರ ಫಿಟ್ನೆಸ್ ಬಗ್ಗೆ ಫಿಸಿಯೋ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಸೂರ್ಯಕುಮಾರ್ ಯಾದವ್ ಅಲಭ್ಯರಾಗಲಿದ್ದಾರೆ ಎಂದು ಮುಂಬೈ ತಂಡದ ಆಟಗಾರ ಪಿಯೂಷ್ ಚಾವ್ಲಾ ತಿಳಿಸಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಅವರು ಲಭ್ಯರಿರುವುದು ಅನುಮಾನ.

ಒಟ್ಟಿನಲ್ಲಿ ನೂತನ ನಾಯಕನೊಂದಿಗೆ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ತಂಡವು ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸೋಲಿಗೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಇಲ್ಲದಿರುವುದು ಕೂಡ ಒಂದು ಕಾರಣ. ಇದೀಗ ಸೂರ್ಯನ ಎಂಟ್ರಿ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದ್ದು, ಇದು ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.