ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ (Gautam Gambhir) ಮುಖಾಮುಖಿಯಾದರೆ ಅಲ್ಲೊಂದಷ್ಟು ಕಿರಿಕ್, ಒಂದಷ್ಟು ದ್ವೇಷ... ಮತ್ತೊಂದಷ್ಟು ವಾಗ್ವಾದ... ಎಂಬುದು ಸಾಮಾನ್ಯವಾಗಿತ್ತು. ಹೀಗಾಗಿಯೇ RCB vs KKR ನಡುವಣ ಪಂದ್ಯವು ಎಲ್ ಪ್ರೈಮೆರೊ ಮ್ಯಾಚ್ ಆಗಿ ಗುರುತಿಸಿಕೊಂಡಿತ್ತು.
ಏಕೆಂದರೆ ಇದೇ ಮೈದಾನದಲ್ಲಿ ಕಳೆದ ವರ್ಷ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ LSG ತಂಡದ ಮೆಂಟರ್ ಆಗಿದ್ದ ಗಂಭೀರ್ ಅನುಚಿತವಾಗಿ ವರ್ತಿಸಿದ್ದರು. ರಣರೋಚಕ ಪಂದ್ಯದಲ್ಲಿ LSG ಗೆಲ್ಲುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳತ್ತ ಮುಖ ಮಾಡಿ ಗಂಭೀರ್ ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿದ್ದರು.
ಹೀಗಾಗಿ ಕೆಕೆಆರ್ ಮತ್ತು ಆರ್ಸಿಬಿ ನಡುವಣ ಪಂದ್ಯದಲ್ಲೂ ರೋಚಕ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಅಲ್ಲದೆ ಅಭಿಮಾನಿಗಳಿಗೆ ಕ್ರೀಡಾಸ್ಫೂರ್ತಿಯ ಸಂದೇಶ ಸಾರಿದ್ದಾರೆ.
ಆರ್ಸಿಬಿ ಇನಿಂಗ್ಸ್ನ ಸ್ಟ್ರಾಟರ್ಜಿಕ್ ಟೈಮ್ ಔಟ್ ವೇಳೆ ಮೈದಾನಕ್ಕೆ ಆಗಮಿಸಿದ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಗೆ ಹಸ್ತಲಾಘವ ನೀಡಿದರು. ಅಲ್ಲದೆ ಇಬ್ಬರು ಪರಸ್ಪರ ಆಲಿಂಗನೊಂದಿಗೆ ಮಾತುಕತೆ ನಡೆಸಿದರು.
ಇದೀಗ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವಣ ಅಪ್ಪುಗೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಹಿರಿಯ ಕ್ರಿಕೆಟಿಗರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Published On - 6:58 am, Sat, 30 March 24