Virat Kohli: ವಿರಾಟ್ ಕೊಹ್ಲಿಗೆ ನೋಬಾಲ್ ನೀಡದಿರಲು ಇದುವೇ ಕಾರಣ..!
TV9 Web | Updated By: ಝಾಹಿರ್ ಯೂಸುಫ್
Updated on:
Apr 22, 2024 | 10:08 AM
IPL 2024: ಐಪಿಎಲ್ 2024ರ 36ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಜಯ ಸಾಧಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 222 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 221 ರನ್ಗಳಿಸುವ ಮೂಲಕ 1 ರನ್ನಿಂದ ಸೋಲೊಪ್ಪಿಕೊಂಡಿತು.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 36ನೇ ಪಂದ್ಯವು ನಾಟಕೀಯ ಸನ್ನಿವೇಶಕ್ಕೆ ಕಾರಣವಾಗಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ನೀಡಿದ ತೀರ್ಪು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
2 / 7
ಹರ್ಷಿತ್ ರಾಣ ಎಸೆದ 3ನೇ ಓವರ್ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಈ ಎಸೆತವು ಅವರ ಸೊಂಟಕ್ಕಿಂತ ಮೇಲ್ಭಾಗದಲ್ಲಿತ್ತು. ಹೀಗಾಗಿ ಕೊಹ್ಲಿ ರಿವ್ಯೂ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
3 / 7
ಮೂರನೇ ಅಂಪೈರ್ನ ಈ ತೀರ್ಪಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಫೀಲ್ಡ್ ಅಂಪೈರ್ಗಳ ಜೊತೆ ವಾಗ್ವಾದಕ್ಕಿಳಿದಿದ್ದರು. ಅಲ್ಲದೆ ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಮೈದಾನ ತೊರೆದಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಅಂಪೈರ್ ತೀರ್ಪಿನ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಅಷ್ಟಕ್ಕೂ ವಿರಾಟ್ ಕೊಹ್ಲಿ ಔಟಾ ಅಥವಾ ನಾಟೌಟಾ ಎಂದು ಕೇಳಿದರೆ, ಸ್ಪಷ್ಟ ಉತ್ತರ- ಔಟ್.
4 / 7
ಏಕೆಂದರೆ ಹರ್ಷಿತ್ ರಾಣ ಎಸೆದ ಚೆಂಡು ವಿರಾಟ್ ಕೊಹ್ಲಿಯ ಸೊಂಟಕ್ಕಿಂತ ಮೇಲ್ಬಾಗದಲ್ಲಿ ಬಂದಿದ್ದರೂ, ಈ ಚೆಂಡನ್ನು ಎದುರಿಸುವಾಗ ಕೊಹ್ಲಿ ಕ್ರೀಸ್ನಿಂದ ಹೊರಗಿದ್ದರು. ಅಂದರೆ ಇಲ್ಲಿ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ಎಲ್ಲಿ ಸ್ಟ್ಯಾನ್ಸ್ ತೆಗೆದುಕೊಂಡಿದ್ದಾರೆ ಎಂಬುದನ್ನು ಆಧರಿಸಿ ನೋ ಬಾಲ್ ಅನ್ನು ನಿರ್ಧರಿಸಲಾಗುತ್ತದೆ.
5 / 7
ಇಲ್ಲಿ ವಿರಾಟ್ ಕೊಹ್ಲಿ ಕ್ರೀಸ್ನಿಂದ ಮುನ್ನುಗ್ಗಿ ಬಂದು ಚೆಂಡನ್ನು ಎದುರಿಸಿದ್ದಾರೆ. ಈ ವೇಳೆ ಚೆಂಡು ಅವರ ಸೊಂಟದ ಮೇಲ್ಭಾಗಕ್ಕೆ ಬಂದಿದೆ. ಆದರೆ ನೋ ಬಾಲ್ ಅನ್ನು ಪರಿಶೀಲಿಸಲು ಟಿವಿ ಅಂಪೈರ್ ಹಾಕ್-ಐ ತಂತ್ರಜ್ಞಾನ ಬಳಸುವಾಗ ಬ್ಯಾಟ್ಸ್ಮನ್ ಬ್ಯಾಟಿಂಗ್ಗೆ ನಿಂತ ಜಾಗವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
6 / 7
ಅದರಂತೆ ಕೊಹ್ಲಿ ಕ್ರೀಸ್ನಲ್ಲಿ ಬ್ಯಾಟಿಂಗ್ ಸ್ಟ್ಯಾನ್ಸ್ ತೆಗೆದುಕೊಂಡಿರುವುದನ್ನು ಪರಿಗಣನೆಗೆ ತೆಗೆದುಕೊಂಡಾಗ ಚೆಂಡಿನ ಪಥವು ಸೊಂಟದ ಭಾಗಕ್ಕಿಂತ 0.12 ಮೀಟರ್ ಕೆಳಭಾಗದಲ್ಲಿದೆ. ಅಂದರೆ ಕೊಹ್ಲಿಯ ಎತ್ತರಕ್ಕೆ ಅನುಗುಣವಾಗಿ ನೋ ಬಾಲ್ ನೀಡಬೇಕಿದ್ದರೆ ಸೊಂಟಕ್ಕಿಂತ 1.04 ಮೀಟರ್ ಮೇಲ್ಬಾಗದಲ್ಲಿ ಚೆಂಡು ಸಾಗಬೇಕು. ಆದರೆ ಹರ್ಷಿತ್ ರಾಣ ಎಸೆದ ಚೆಂಡು 0.92 ಮೀಟರ್ ಎತ್ತರದಲ್ಲಿ ಸಾಗಿದೆ. ಹೀಗಾಗಿಯೇ ಮೂರನೇ ಅಂಪೈರ್ ನೋ ಬಾಲ್ ಅಲ್ಲ, ಫುಲ್ ಟಾಸ್ ಬಾಲ್-ಔಟ್ ಎಂದು ತೀರ್ಪು ನೀಡಿದ್ದಾರೆ.
7 / 7
ಇನ್ನು ಈ ವಿವಾದ ಹುಟ್ಟಿಕೊಳ್ಳಲು ಕೂಡ ಮುಖ್ಯ ಕಾರಣ ಮೂರನೇ ಅಂಪೈರ್ ತೋರಿಸಿದ ಹಾಕ್-ಐ ಚಿತ್ರ ಎಂದರೆ ತಪ್ಪಾಗಲಾರದು. ಏಕೆಂದರೆ ಟಿವಿ ಅಂಪೈರ್ ವಿರಾಟ್ ಕೊಹ್ಲಿ ಮುನ್ನುಗ್ಗಿ ಬಂದು ಬಾಲ್ನ್ನು ಎದುರಿಸುತ್ತಿರುವುದರೊಂದಿಗೆ ಚೆಂಡಿನ ಪಥ ತೋರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟಿಂಗ್ ಸ್ಟ್ಯಾನ್ಸ್ (ಬ್ಯಾಟಿಂಗ್ಗೆ ನಿಂತಿರುವ ಸ್ಥಾನ) ತೋರಿಸಿ ಚೆಂಡಿನ ಪಥವನ್ನು ಪ್ರದರ್ಶಿಸಿದ್ದರೆ ಇಂತಹ ಯಾವುದೇ ಗೊಂದಲ ಏರ್ಪಡುತ್ತಿರಲಿಲ್ಲ.