IPL 2024: ಲಸಿತ್ ಮಾಲಿಂಗ ದಾಖಲೆ ಮುರಿದ ಸುನಿಲ್ ನರೈನ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲೇ ಒಂದೇ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಇದೀಗ ಸುನಿಲ್ ನರೈನ್ ಪಾಲಾಗಿದೆ. 2012 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ನರೈನ್ ಒಟ್ಟು 172 ವಿಕೆಟ್ ಕಬಳಿಸಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್ ಪರ 170 ವಿಕೆಟ್ ಕಬಳಿಸಿ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು.
Updated on: Apr 22, 2024 | 12:17 PM

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 36ನೇ ಪಂದ್ಯದಲ್ಲಿ ಸುನಿಲ್ ನರೈನ್ (Sunil Narine) ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ನರೈನ್ 34 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಎರಡು ವಿಕೆಟ್ಗಳೊಂದಿಗೆ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಸುನಿಲ್ ನರೈನ್ 6ನೇ ಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ 6ನೇ ಸ್ಥಾನದಲ್ಲಿದ್ದ ಲಸಿತ್ ಮಾಲಿಂಗ ಇದ್ದರು. 122 ಐಪಿಎಲ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಮಾಲಿಂಗ ಒಟ್ಟು 170 ವಿಕೆಟ್ಗಳನ್ನು ಕಬಳಿಸಿ ಈ ದಾಖಲೆ ಬರೆದಿದ್ದರು.

ಇದೀಗ 168 ಐಪಿಎಲ್ ಇನಿಂಗ್ಸ್ಗಳ ಮೂಲಕ ಸುನಿಲ್ ನರೈನ್ ಒಟ್ಟು 172 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ 2ನೇ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಡ್ವೇನ್ ಬ್ರಾವೊ (183) ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಯುಜ್ವೇಂದ್ರ ಚಹಲ್ ಅಗ್ರಸ್ಥಾನದಲ್ಲಿದ್ದಾರೆ. ಚಹಲ್ 151 ಇನಿಂಗ್ಸ್ಗಳ ಮೂಲಕ ಒಟ್ಟು 199 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ ದ್ವಿಶತಕದ ಅಂಚಿನಲ್ಲಿರುವ ಚಹಲ್ ಒಂದು ವಿಕೆಟ್ನೊಂದಿಗೆ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ.
