
ಐಪಿಎಲ್ನ (IPL 2024) 45ನೇ ಪಂದ್ಯವು ಸ್ಪೋಟಕ ಸೆಂಚುರಿಗೆ ಸಾಕ್ಷಿಯಾಗಿದೆ. ಹೀಗೆ ಕ್ಷಣಾರ್ಧದಲ್ಲೇ ಸೆಂಚುರಿ ಸಿಡಿಸಿ ಅಬ್ಬರಿಸಿದ್ದು ಮತ್ಯಾರೂ ಅಲ್ಲ, ಆರ್ಸಿಬಿ ತಂಡದ ದಾಂಡಿಗ ವಿಲ್ ಜಾಕ್ಸ್ (Will Jacks). ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಾಕ್ಸ್ ಅರ್ಧಶತಕ ಪೂರೈಸಲು ಬರೋಬ್ಬರಿ 31 ಎಸೆತಗಳನ್ನು ತೆಗೆದುಕೊಂಡಿದ್ದರು.

ಆದರೆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ತೆಗೆದುಕೊಂಡಿದ್ದು ಕೇವಲ 10 ಎಸೆತಗಳು ಮಾತ್ರ. ಅಂದರೆ 31 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರೆ, ಮುಂದಿನ 10 ಎಸೆತಗಳಲ್ಲಿ 50 ರನ್ ಬಾರಿಸಿ ಶತಕ ಪೂರೈಸಿದರು. ಇದರೊಂದಿಗೆ ಐಪಿಎಲ್ನ ವಿಶೇಷ ದಾಖಲೆಯೊಂದು ವಿಲ್ ಜಾಕ್ಸ್ ಪಾಲಾಯಿತು.

ಐಪಿಎಲ್ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಗೇಲ್, ಮುಂದಿನ 13 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ ಶತಕ ಪೂರೈಸಿದ್ದರು. ಅಂದರೆ ಕೇವಲ 13 ಎಸೆತಗಳ ಮೂಲಕ ಗೇಲ್ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿ ದಾಖಲೆ ಬರೆದಿದ್ದರು.

ಇದೀಗ ವಿಲ್ ಜಾಕ್ಸ್ ಸಿಡಿಲಬ್ಬರಕ್ಕೆ ಈ ದಾಖಲೆ ಉಡೀಸ್ ಆಗಿದೆ. ಅರ್ಧಶತಕದ ಬಳಿಕ ಸಿಕ್ಸ್, ಎರಡು ರನ್, ಸಿಕ್ಸ್, ಫೋರ್, ಡಾಟ್, ಸಿಕ್ಸ್, ಸಿಕ್ಸ್, ಫೋರ್, ಸಿಕ್ಸ್ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಾಕ್ಸ್ ಕೇವಲ 10 ಎಸೆತಗಳಲ್ಲಿ ಹಾಫ್ ಸೆಂಚುರಿಯನ್ನು ಶತಕವನ್ನಾಗಿ ಪರಿವರ್ತಿಸಿದ್ದಾರೆ.

ಈ ಮೂಲಕ ಕಳೆದ ಒಂದು ದಶಕದಿಂದ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ವಿಲ್ ಜಾಕ್ಸ್ ಮುರಿದಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅರ್ಧಶತಕದ ಬಳಿಕ ಅತೀ ವೇಗವಾಗಿ ಶತಕ ಪೂರೈಸಿದ ಭರ್ಜರಿ ದಾಖಲೆಯನ್ನು ಆರ್ಸಿಬಿ ತಂಡದ ಸ್ಪೋಟಕ ದಾಂಡಿಗ ವಿಲ್ ಜಾಕ್ಸ್ ತಮ್ಮದಾಗಿಸಿಕೊಂಡಿದ್ದಾರೆ.