IPL 2024: ಪ್ಲೇಆಫ್ ಪ್ರವೇಶಿಸಲು RCB ತಂಡಕ್ಕಿದೆ ಉತ್ತಮ ಅವಕಾಶ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಇದುವರೆಗೆ 10 ಪಂದ್ಯಗಳನ್ನಾಡಿರುವ ಆರ್ಸಿಬಿ 3 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಸಿಎಸ್ಕೆ ವಿರುದ್ಧದ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಆರ್ಸಿಬಿ ಆ ಬಳಿಕ ಪಂಜಾಬ್ ಕಿಂಗ್ಸ್, ಎಸ್ಆರ್ಹೆಚ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವಿನ ನಗೆ ಬೀರಿದೆ.
Updated on: Apr 29, 2024 | 9:29 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ತಂಡವು ಇದೀಗ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಮೊದಲಾರ್ಧದ 7 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ್ದ ಆರ್ಸಿಬಿ, ದ್ವಿತೀಯಾರ್ಧದಲ್ಲಿ 2 ಗೆಲುವು ಸಾಧಿಸಿದೆ. ಈ ಮೂಲಕ ಒಟ್ಟು 6 ಅಂಕಗಳನ್ನು ಕಲೆಹಾಕಿದೆ.

ಈ 6 ಅಂಕಗಳೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ಆಸೆ ಕೂಡ ಜೀವಂತವಾಗಿದೆ. ಅಂದರೆ ಮುಂದಿನ 4 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದರೆ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆದರೆ ಅದಕ್ಕೂ ಮುನ್ನ ಇತರೆ ತಂಡಗಳ ಫಲಿತಾಂಶಗಳನ್ನು ಎದುರು ನೋಡಬೇಕಾಗುತ್ತದೆ.

ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ 6 ಅಂಕಗಳನ್ನು ಹೊಂದಿದೆ. ಇನ್ನು ಗುಜರಾತ್ ಟೈಟಾನ್ಸ್ ತಂಡ 8 ಪಾಯಿಂಟ್ಸ್ ಪಡೆದುಕೊಂಡಿದೆ. ಇನ್ನುಳಿದಂತೆ ಕೆಕೆಆರ್, ಸಿಎಸ್ಕೆ, ಎಲ್ಎಸ್ಜಿ, ಎಸ್ಆರ್ಹೆಚ್, ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಅಂಕಗಳನ್ನು ಹೊಂದಿದೆ. ಅತ್ತ ರಾಜಸ್ಥಾನ್ ರಾಯಲ್ಸ್ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಅಂದರೆ ಇಲ್ಲಿ ಆರ್ಆರ್ ತಂಡದ ಗೆಲುವು ಮತ್ತು ಸೋಲು ಆರ್ಸಿಬಿ ತಂಡವನ್ನು ಬಾಧಿಸುವುದಿಲ್ಲ. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ 20 ಅಂಕಗಳನ್ನು ಪಡೆದರೆ ಆರ್ಸಿಬಿಗೆ ಅನುಕೂಲವಾಗಲಿದೆ. ಹಾಗೆಯೇ ಎಸ್ಆರ್ಹೆಚ್ ಮುಂದಿನ ಪಂದ್ಯಗಳನ್ನು ಗೆದ್ದು 20 ಅಂಕಗಳನ್ನು ಪಡೆಯಬೇಕು. ಇನ್ನುಳಿದಂತೆ ಕೆಕೆಆರ್ 16 ಅಂಕಗಳನ್ನು ಪಡೆದರೆ ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಾಗಲಿದೆ.

ಆರ್ಆರ್, ಎಸ್ಆರ್ಹೆಚ್, ಕೆಕೆಆರ್ ಕ್ರಮವಾಗಿ 20, 20 ಮತ್ತು 16 ಅಂಕಗಳನ್ನು ಪಡೆಯುವುದರಿಂದ ಸಿಎಸ್ಕೆ, ಎಲ್ಎಸ್ಜಿ, ಜಿಟಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಅಂಕಗಳು 12 ರಲ್ಲೇ ಉಳಿಯಲಿದೆ. ಅಂದರೆ ಈ ತಂಡಗಳು ಆರಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬಾರದು. ಒಂದು ವೇಳೆ 7 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ.

ಇದೇ ವೇಳೆ ಆರ್ಸಿಬಿ ತಂಡವು ಮುಂದಿನ ಎಲ್ಲಾ ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ಒಟ್ಟು 14 ಅಂಕಗಳನ್ನು ಸಂಪಾದಿಸಬಹುದು. ಈ ಮೂಲಕ ಇತರೆ ತಂಡಗಳನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವ ಅವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊರೆಯಲಿದೆ. ಅದರಂತೆ ಆರ್ಸಿಬಿ ತಂಡ ಈ ಬಾರಿ ಪ್ಲೇಆಫ್ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.
