ಈ ಬಾರಿಯ ಐಪಿಎಲ್ನಲ್ಲಿ (IPL 2024) ಆಡಿರುವ 9 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದಾಗ್ಯೂ ಸಂಜು ಸ್ಯಾಮ್ಸನ್ ಪಡೆ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿಲ್ಲ ಎಂಬುದು ವಿಶೇಷ.
ಅಂದರೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ಗೆ ನೇರ ಅರ್ಹತೆ ಪಡೆಯಲು ಇನ್ನೆರಡು ಪಂದ್ಯಗಳನ್ನು ಗೆಲ್ಲಬೇಕಿದೆ. ಆರ್ಸಿಬಿ ತಂಡವನ್ನು ಹೊರತುಪಡಿಸಿ ಉಳಿದೆಲ್ಲಾ ತಂಡಗಳಿಗೂ 16 ಅಂಕಗಳನ್ನು ಗಳಿಸುವ ಅವಕಾಶವಿದೆ. ಹೀಗಾಗಿ ಪ್ರಸ್ತುತ 16 ಅಂಕಗಳನ್ನು ಹೊಂದಿರುವ ಆರ್ಆರ್ ತಂಡವು ಮುಂದಿನ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸುವನ್ನು ಬಹುತೇಕ ಖಚಿತಪಡಿಸಿಕೊಳ್ಳಬಹುದು.
ಹಾಗೆಯೇ ಮುಂದಿನ 5 ಪಂದ್ಯಗಳಲ್ಲಿ 2 ಮ್ಯಾಚ್ಗಳನ್ನು ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ ಪ್ಲೇಆಫ್ಗೆ ಅಧಿಕೃತವಾಗಿ ಅರ್ಹತೆ ಪಡೆಯಲಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಆರ್ಆರ್ ಪ್ಲೇಆಫ್ಗೆ ಪ್ರವೇಶಿಸುವ ವಿಶ್ವಾಸದಲ್ಲಿದೆ.
ಇನ್ನು 8 ಪಂದ್ಯಗಳಲ್ಲಿ 10 ಅಂಕ ಪಡೆದಿರುವ ಕೆಕೆಆರ್ ಮುಂದಿನ 6 ಪಂದ್ಯಗಳಲ್ಲಿ 5 ಜಯ ಸಾಧಿಸಿದರೆ ಒಟ್ಟು 20 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಿಬಹುದು. ಹಾಗೆಯೇ 10 ಅಂಕಗಳನ್ನು ಹೊಂದಿರುವ ಸಿಎಸ್ಕೆ ತಂಡ ಮುಂದಿನ 5 ಪಂದ್ಯಗಳಲ್ಲೂ ಜಯ ಸಾಧಿಸಿ 20 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಳ್ಳಬಹುದು. ಅದೇ ರೀತಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೂ ಮುಂದಿನ 5 ಪಂದ್ಯಗಳಲ್ಲಿ ಜಯ ಸಾಧಿಸಿ 20 ಅಂಕಗಳನ್ನು ಗಳಿಸಲು ಉತ್ತಮ ಅವಕಾಶವಿದೆ.
ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಲು ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನೇರ ಪೈಪೋಟಿ ಇದೆ. ಈ ಪೈಪೋಟಿ ನಡುವೆ ಕೆಲ ತಂಡಗಳ ಲೆಕ್ಕಾಚಾರಗಳು ತಲೆಕೆಳಗಾದರೆ ಮಾತ್ರ ಉಳಿದ ಟೀಮ್ಗಳು ಪ್ಲೇಆಫ್ ರೇಸ್ನಲ್ಲಿ ಮುಂಚೂಣಿಗೆ ಬರಲಿದೆ.
Published On - 11:07 am, Mon, 29 April 24