
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಬಾರಿಯ ಐಪಿಎಲ್ನ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

ಮುಂಬರುವ ಸಾರ್ವತ್ರಿಕ ಚುನಾವಣಾ ನಿಮಿತ್ತ ಐಪಿಎಲ್ನ ಉಳಿದ ಪಂದ್ಯಗಳ ದಿನಾಂಕವನ್ನು ಪ್ರಕಟಿಸಲಾಗಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅದರಂತೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ 5 ಹಂತಗಳಲ್ಲಿ ಮತದಾನ ನಡೆಯಲಿದೆ. ಇದೇ ಅವಧಿಯ ನಡುವೆ ಐಪಿಎಲ್ ಪಂದ್ಯಗಳ ದಿನಾಂಕವನ್ನು ನಿಗದಿ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಹೀಗಾಗಿ ಉಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಣೆ ವಿಳಂಬವಾಗಿದ್ದು, ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಬಿಸಿಸಿಐ ತಿಳಿಸಿದೆ.

ಇನ್ನು ಮೊದಲ ಸುತ್ತಿನಲ್ಲಿ ನಡೆಯಲಿರುವ 21 ಪಂದ್ಯಗಳಲ್ಲಿ ಪ್ರಥಮ ಮ್ಯಾಚ್ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಇನ್ನು ಮಾರ್ಚ್ 23 ರಂದು ಎರಡು ಪಂದ್ಯಗಳು ನಡೆಯಲಿದ್ದು, 3.30 ಕ್ಕೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಹಾಗೆಯೇ ರಾತ್ರಿ 7.30 ಕ್ಕೆ ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಕಣಕ್ಕಿಳಿಯಲಿದೆ.

ಮೊದಲ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ರಾತ್ರಿ 7.30 ರಿಂದ ಶುರುವಾಗಲಿದೆ. ಹಾಗೆಯೇ ಡಬಲ್ ಹೆಡ್ಡರ್ ಪಂದ್ಯಗಳಿದ್ದ ದಿನ ಮೊದಲ ಮ್ಯಾಚ್ 3.30 ಕ್ಕೆ ಆರಂಭವಾಗಲಿದೆ. ಈ ಮೂಲಕ ಮೊದಲ 4 ದಿನಗಳಲ್ಲೇ 10 ತಂಡಗಳು ಕೂಡ ಐಪಿಎಲ್ ಅಭಿಯಾನ ಆರಂಭಿಸಲಿದೆ.

ಮಾರ್ಚ್ 22 ರಂದು ಐಪಿಎಲ್ ಅಭಿಯಾನ ಆರಂಭಿಸಲಿರುವ ಆರ್ಸಿಬಿ ತಂಡವು ತವರಿನಲ್ಲಿ ಮೊದಲ ಪಂದ್ಯವಾಡಲಿರುವುದು ಮಾರ್ಚ್ 25 ರಂದು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಆರ್ಸಿಬಿ ಮಾರ್ಚ್ 29 ರಂದು ಕೆಕೆಆರ್, ಏಪ್ರಿಲ್ 2 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಆರ್ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಟ್ಟು 3 ಪಂದ್ಯಗಳನ್ನಾಡಲಿದೆ.

ಅದರಂತೆ ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ ನಡೆಯಲಿರುವ ಐಪಿಎಲ್ನ ಮೊದಲ ಸುತ್ತಿನಲ್ಲಿ 10 ತಂಡಗಳು ಒಟ್ಟು 21 ಪಂದ್ಯಗಳನ್ನಾಡಲಾಗುತ್ತಿದ್ದು, ಇದರ ನಡುವೆ ಉಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
Published On - 7:52 am, Thu, 21 March 24