17ನೇ ಆವೃತ್ತಿಯ ಐಪಿಎಲ್ ಈಗಾಗಲೇ ತನ್ನ ಅರ್ಧಪಯಣ ಮುಗಿಸಿದೆ. ಎಲ್ಲಾ ತಂಡಗಳು ತಲಾ 7 ಪಂದ್ಯಗಳನ್ನು ಆಡಿವೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಸ್ಥಾನದಲ್ಲಿದೆ.
ಅದಾಗ್ಯೂ ಈ ಬಾರಿಯ ಐಪಿಎಲ್ನಲ್ಲಿ ಐದು ತಂಡಗಳ ನಾಯಕರು ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ಈ ಐವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಕೂಡ ಸೇರಿದ್ದಾರೆ.
ವಾಸ್ತವವಾಗಿ ಐದು ತಂಡಗಳ ನಾಯಕರು ನಿಧಾನಗತಿಯ ಓವರ್ ನಿಯಮವನ್ನು ಪಾಲಿಸದ ಕಾರಣದಿಂದಾಗಿ ಈಗಾಗಲೇ ಪಂದ್ಯ ಶುಲ್ಕವನ್ನು ಪಾವತಿಸಿದ್ದಾರೆ. ಇದೀಗ ಈ ಐವರು ನಾಯಕರು ಮತ್ತೊಮ್ಮೆ ಈ ತಪ್ಪನ್ನು ಎಸೆಗಿದರೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.
ಇದರಲ್ಲಿ ನಿನ್ನೆಯಷ್ಟೇ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸಲು ವಿಫಲವಾಯಿತು. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಅದರಂತೆ ಬಿಸಿಸಿಐ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದೀಗ ಮುಂಬೈ ಇಂಡಿಯನ್ಸ್ ತಂಡ ಸತತ ಎರಡು ಪಂದ್ಯಗಳಲ್ಲಿ ಸ್ಲೋ ಓವರ್ ರೇಟ್ ನಿಯಮ ಮುರಿದರೆ ತಂಡದ ನಾಯಕ ಹಾರ್ದಿಕ್ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ.
ಮುಂಬೈ ಇಂಡಿಯನ್ಸ್ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ನಿಧಾನಗತಿಯ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ್ದವು. ಹೀಗಾಗಿ ಡೆಲ್ಲಿ ತಂಡದ ನಾಯಕ ರಿಷಬ್ ಪಂತ್ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಅವರಿಗೆ ಬಿಸಿಸಿಐ ದಂಡ ವಿಧಿಸಿತ್ತು.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡು ಬಾರಿ ಈ ನಿಯಮವನ್ನು ಉಲ್ಲಂಘಿಸಿದೆ. ಹೀಗಾಗಿ ತಂಡದ ನಾಯಕ ರಿಷಬ್ ಪಂತ್ ಎರಡು ಬಾರಿ ತಲಾ 12 ಲಕ್ಷ ರೂಗಳನ್ನು ಅಂದರೆ 24 ಲಕ್ಷರೂಗಳನ್ನು ದಂಡವಾಗಿ ಪಾವತಿಸಿದ್ದಾರೆ.
ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಐದು ತಂಡಗಳು ಈ ನಿಯಮವನ್ನು ಮುರಿದಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, ಡೆಲ್ಲಿ ನಾಯಕ ರಿಷಭ್ ಪಂತ್, ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಹೆಸರು ಸೇರಿದೆ.