
ಪಂಜಾಬ್ನ ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ 7 ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ತನ್ನ ಮೂರನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ 78 ರನ್ ಹಾಗೂ ತಿಲಕ್ ವರ್ಮಾ ಅವರ ಅಜೇಯ 34 ರನ್ಗಳ ಆಧಾರದ ಮೇಲೆ 190 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಈ ಪಂದ್ಯದಲ್ಲಿ ಮುಂಬೈ ಪರ ಅಜೇಯ 34 ರನ್ ಸಿಡಿಸಿದ ತಿಲಕ್ ಕೇವಲ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಮೂಲಕ ತನ್ನ21 ನೇ ವಯಸ್ಸಿನಲ್ಲಿ 50 ಸಿಕ್ಸರ್ ಬಾರಿಸಿದ ಭಾರತದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ತಿಲಕ್ ವರ್ಮಾಗೂ ಮುನ್ನ ರಿಷಬ್ ಪಂತ್ ತಮ್ಮ 21ನೇ ವಯಸ್ಸಿನಲ್ಲಿ 94 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಈ ದಾಖಲೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದೀಗ ತಿಲಕ್ ವರ್ಮಾ 50 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿರುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಇದ್ದಾರೆ. ಜೈಸ್ವಾಲ್ 21ನೇ ವಯಸ್ಸಿನಲ್ಲಿ 48 ಸಿಕ್ಸರ್ ಬಾರಿಸಿದ್ದಾರೆ.

ಈ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೆ 7 ಇನ್ನಿಂಗ್ಸ್‌ಗಳನ್ನಾಡಿರುವ ತಿಲಕ್ 41.60 ಸರಾಸರಿಯಲ್ಲಿ 208 ರನ್ ಗಳಿಸಿದ್ದಾರೆ, ಇದರಲ್ಲಿ ಅರ್ಧಶತಕವೂ ಸೇರಿದೆ. ಈ ಅವಧಿಯಲ್ಲಿ ಎರಡು ಬಾರಿ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದ್ದಾರೆ.

ಇನ್ನು ತಿಲಕ್ ವರ್ಮಾ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಮುಂಬೈ ಇಂಡಿಯನ್ಸ್ ಪರ ಐಪಿಎಲ್ ವೃತ್ತಿಜೀವನ ಆರಂಭಿಸಿರುವ ತಿಲಕ್ ಇದುವರೆಗೆ ಆಡಿರುವ 32 ಪಂದ್ಯಗಳಲ್ಲಿ 39.5 ಸರಾಸರಿಯಲ್ಲಿ 948 ರನ್ ಗಳಿಸಿದ್ದಾರೆ, ಇದರಲ್ಲಿ 4 ಅರ್ಧ ಶತಕಗಳು ಸೇರಿವೆ.