17ನೇ ಆವೃತ್ತಿಯ ಐಪಿಎಲ್ ಇಂದಿನಿಂದ ಆರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣು ಜನವರಿ ನಂತರ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಡಲಿರುವ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ.
ವಿರಾಟ್ ಇತ್ತೀಚೆಗಷ್ಟೇ ಎರಡನೇ ಮಗುವಿನ ಜನನದ ಕಾರಣ ಇಂಗ್ಲೆಂಡ್ ಸರಣಿಯಿಂದ ಹಿಂದೆ ಸರಿದಿದ್ದರು. ಇದೀಗ ತಿಂಗಳುಗಳ ನಂತರ ಕ್ರಿಕೆಟ್ ಅಖಾಡಕ್ಕಿಳಿಯುತ್ತಿರುವ ಕಿಂಗ್ ಕೊಹ್ಲಿ ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿಯೇ ದೊಡ್ಡ ದಾಖಲೆ ನಿರ್ಮಿಸಲಿದ್ದಾರೆ.
ವಾಸ್ತವವಾಗಿ, ವಿರಾಟ್ ಕೊಹ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿದರೆ ಈ ತಂಡದ ವಿರುದ್ಧ 1000 ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ವಿರಾಟ್ ಇದುವರೆಗೆ ಒಟ್ಟು 999 ರನ್ ಗಳಿಸಿದ್ದಾರೆ. ಇದು ಚಾಂಪಿಯನ್ಸ್ ಲೀಗ್ ಅಂಕಿಅಂಶಗಳನ್ನು ಸಹ ಒಳಗೊಂಡಿದೆ.
ಚಾಂಪಿಯನ್ಸ್ ಲೀಗ್ ಹೊರತುಪಡಿಸಿ ಈ ಪಂದ್ಯದಲ್ಲಿ ವಿರಾಟ್ 15 ರನ್ ಗಳಿಸಿದರೆ ಸಿಎಸ್‌ಕೆ ವಿರುದ್ಧ 1000 ರನ್ ಪೂರೈಸಲಿದ್ದಾರೆ. ಅಂದರೆ ಇಲ್ಲಿಯವರೆಗೆ ವಿರಾಟ್ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ 985 ರನ್ ಗಳಿಸಿದ್ದಾರೆ. ಅವರಿಗಿಂತ ಮೊದಲು ಒಬ್ಬ ಆಟಗಾರ ಮಾತ್ರ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
ಇನ್ನು ಸಿಎಸ್‌ಕೆ ವಿರುದ್ಧ ಸಾವಿರಕ್ಕೂ ಅಧಿಕ ರನ್ ಬಾರಿಸಿದ ಆಟಗಾರರ ಪೈಕಿ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. ಧವನ್ ಇದುವರೆಗೆ ಸಿಎಸ್‌ಕೆ ವಿರುದ್ಧ 1057 ರನ್ ಕಲೆಹಾಕಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ 75 ರನ್ ಕಲೆಹಾಕಿದರೆ, ಧವನ್ ದಾಖಲೆಯನ್ನೂ ಮುರಿಯಲ್ಲಿದ್ದಾರೆ.
ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿಯ ದಾಖಲೆ ನೋಡುವುದಾದರೆ.. ವಿರಾಟ್ ಈ ಲೀಗ್ನಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, 7000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಕೂಡ. ವಿರಾಟ್ ಐಪಿಎಲ್‌ನಲ್ಲಿ 237 ಪಂದ್ಯಗಳ 229 ಇನ್ನಿಂಗ್ಸ್‌ಗಳಲ್ಲಿ 7263 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ, 50 ಅರ್ಧ ಶತಕ ಕೂಡ ಸೇರಿವೆ.