
IPL 2025: ಐಪಿಎಲ್ ಸೀಸನ್-18ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಬಹುತೇಕ ತಂಡಗಳು 10 ಪಂದ್ಯಗಳನ್ನಾಡಿದ್ದು, ಇನ್ನುಳಿದಿರುವುದು ಕೆಲವೇ ಕೆಲವು ಪಂದ್ಯಗಳು ಮಾತ್ರ. ಇದೀಗ ಸಿಎಸ್ಕೆ ತಂಡವನ್ನು ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಪ್ಲೇಆಫ್ ರೇಸ್ನಲ್ಲಿದೆ. ಹೀಗೆ ಪ್ಲೇಆಫ್ ರೇಸ್ನಲ್ಲಿರುವ ತಂಡಗಳ ನಡುವೆ ಯಾವ ಟೀಮ್ಗಳು ಮುಂದಿನ ಸುತ್ತಿಗೆ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು.

ಗುಜರಾತ್ ಟೈಟಾನ್ಸ್: ಅಂಬಾಟಿ ರಾಯುಡು ಅವರ ಪ್ರಕಾರ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್ಗೆ ಪ್ರವೇಶಿಸುವುದು ಖಚಿತ. ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ಶುಭ್ಮನ್ ಗಿಲ್ ನೇತೃತ್ವದ ಜಿಟಿ ಪಡೆ ಮುಂದಿನ ಪಂದ್ಯಗಳ ಮೂಲಕ ಪ್ಲೇಆಫ್ ಹಂತಕ್ಕೇರಲಿದೆ ಎಂದು ರಾಯುಡು ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ತಂಡ ಕೂಡ ಮುಂದಿನ ಹಂತಕ್ಕೇರಲಿದೆ. ಪಂಜಾಬ್ ಕಿಂಗ್ಸ್ ತಂಡವು 10 ಪಂದ್ಯಗಳ ಮೂಲಕ 13 ಅಂಕಗಳನ್ನು ಕಲೆಹಾಕಿದ್ದು, ಹೀಗಾಗಿ ಪಂಜಾಬ್ ಪಡೆಯನ್ನು ಸಹ ಪ್ಲೇಆಫ್ ಪೈಪೋಟಿಯಲ್ಲಿ ಎದುರು ನೋಡಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಆರಂಭದಲ್ಲಿ ವಿಫಲರಾದರೂ, ಆ ಬಳಿಕ ಬ್ಯಾಕ್ ಟು ಬ್ಯಾಕ್ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೀಗ 10 ಪಂದ್ಯಗಳಿಂದ 12 ಅಂಕ ಪಡೆದಿರುವ ಮಂಬೈ ಇಂಡಿಯನ್ಸ್ ಕೂಡ ಮುಂದಿನ ಪಂದ್ಯಗಳ ಮೂಲಕ ಪ್ಲೇಆಫ್ ಹಂತಕ್ಕೇರಲಿದೆ ಎಂದು ರಾಯುಡು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡವು ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ರಾಯಲ್ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿಯ ಪ್ಲೇಆಫ್ನಲ್ಲಿ ಆರ್ಸಿಬಿ ತಂಡ ಕೂಡ ಕಾಣಿಸಿಕೊಳ್ಳುವುದು ಖಚಿತ ಎಂದಿದ್ದಾರೆ ಅಂಬಾಟಿ ರಾಯುಡು.