
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ (Digvesh rathi) ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಎಂಬುದು ವಿಶೇಷ.

ಈ ಬಾರಿಯ ಐಪಿಎಲ್ನಲ್ಲಿ ತನ್ನ ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ಗಮನ ಸೆಳೆದಿದ್ದ ದಿಗ್ವೇಶ್ ರಾಥಿ ಇದೇ ಮೊದಲ ಬಾರಿಗೆ ಆರ್ಸಿಬಿ ತಂಡವನ್ನು ಎದುರಿಸುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ದಿಗ್ವೇಶ್ ಅವರನ್ನು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು.

ಇದೀಗ ದಿಗ್ವೇಶ್ ರಾಥಿ ವಿರುದ್ಧದ ಒಂದು ಪಂದ್ಯದ ಬ್ಯಾನ್ ತೆರವಾಗಿದೆ. ಹೀಗಾಗಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಅರ್ಹರಾಗಿದ್ದಾರೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೊನೆಯ ಲೀಗ್ ಪಂದ್ಯದಲ್ಲಿ ದಿಗ್ವೇಶ್ ರಾಥಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ರಾಥಿ ನೋಟ್ಬುಕ್ ಸೆಲೆಬ್ರೇಷನ್ನೊಂದಿಗೆ ಬ್ಯಾಟರ್ನನ್ನು ಕೆಣಕಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಮನ್ ಧೀರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ದರು. ಎರಡು ತಪ್ಪುಗಳಿಗಾಗಿ ದಿಗ್ವೇಶ್ಗೆ ಪಂದ್ಯ ಶುಲ್ಕದ ಶೇ.75 ರಷ್ಟು ದಂಡ ವಿಧಿಸಲಾಗಿತ್ತು.

ಈ ದಂಡದ ಶಿಕ್ಷೆಗಳ ಹೊರತಾಗಿಯೂ ದಿಗ್ವೇಶ್ ರಾಥಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿ ಮೈದಾನದಲ್ಲೇ ಜಗಳಕ್ಕಿಳಿದಿದ್ದರು. ಹೀಗಾಗಿ ಒಂದು ಪಂದ್ಯದ ನಿಷೇಧದೊಂದಿಗೆ ಅವರಿಗೆ ಮತ್ತೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿತ್ತು.

ಹೀಗೆ ಮೂರು ಪಂದ್ಯಗಳಲ್ಲಿ ತೋರಿದ ಅನುಚಿತದ ವರ್ತನೆಯಿಂದಾಗಿ ದಿಗ್ವೇಶ್ ರಾಥಿ ಬರೋಬ್ಬರಿ 9.37 ಲಕ್ಷ ರೂ. ದಂಡ ಕಟ್ಟಿಸಿಕೊಂಡಿದ್ದಾರೆ. ಈ ದಂಡದ ಶಿಕ್ಷೆಯ ಬಳಿಕ ಇದೀಗ ರಾಥಿ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ ಮುಂದಾಳತ್ವದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಬುದು ವಿಶೇಷ.
Published On - 12:05 pm, Tue, 27 May 25