
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಮಂಗಳವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಜಯ ಸಾಧಿಸುವ ಮೂಲಕ ಆರ್ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

ಅದರಂತೆ ಮೇ 29 ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಪರ ಜೋಶ್ ಹೇಝಲ್ವುಡ್ ಕಣಕ್ಕಿಳಿಯಲಿರುವುದನ್ನು ಎಂದು ದಿನೇಶ್ ಕಾರ್ತಿಕ್ ಖಚಿತಪಡಿಸಿದ್ದಾರೆ.

ಎಲ್ಎಸ್ಜಿ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಡಿಕೆ, ಜೋಶ್ ಹೇಝಲ್ವುಡ್ ಸಂಪೂರ್ಣ ಫಿಟ್ ಆಗಿದ್ದು, ಮುಂದಿನ ಪಂದ್ಯದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಹೇಝಲ್ವುಡ್ ಮತ್ತೆ ಆರ್ಸಿಬಿ ಪರ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತ ಜೋಶ್ ಹೇಝಲ್ವುಡ್ ಅಲಭ್ಯತೆಯ ನಡುವೆ ಆರ್ಸಿಬಿ ತಂಡವು ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅದರಲ್ಲೂ ಕಳೆದ ಎರಡು ಪಂದ್ಯಗಳಲ್ಲಿ ಆರ್ಸಿಬಿ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದೀಗ ಹೇಝಲ್ವುಡ್ ಪ್ಲೇಆಫ್ನಲ್ಲಿ ಕಣಕ್ಕಿಳಿಯುತ್ತಿರುವುದು ಆರ್ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್.

ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದಿರುವುದು ಜೋಶ್ ಹೇಝಲ್ವುಡ್. ಕಳೆದ 10 ಪಂದ್ಯಗಳಲ್ಲಿ 36.5 ಓವರ್ ಮಾಡಿದ್ದ ಹೇಝಲ್ವುಡ್ ಒಟ್ಟು 18 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಒಟ್ಟು 103 ಡಾಟ್ ಬಾಲ್ ಎಸೆಯುವ ಮೂಲಕ ಮಿಂಚಿದ್ದಾರೆ. ಹೀಗಾಗಿ ಜೋಶ್ ಹೇಝಲ್ವುಡ್ ಆಗಮನವು ಆರ್ಸಿಬಿ ತಂಡದ ಬೌಲಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವುದರಲ್ಲಿ ಡೌಟೇ ಇಲ್ಲ.