ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅನ್ಕ್ಯಾಪ್ಡ್ ಪಟ್ಟಿಯಿಂದ ಮೂವರು ಹೊರಕ್ಕೆ..!
IPL 2025: ಐಪಿಎಲ್ ನಿಯಮದ ಪ್ರಕಾರ ಅನ್ಕ್ಯಾಪ್ಡ್ ಪಟ್ಟಿಯಿಂದ ರಿಟೈನ್ ಆಗುವ ಆಟಗಾರರಿಗೆ 4 ಕೋಟಿ ರೂ. ನೀಡಿದರೆ ಸಾಕು. ಆದರೀಗ ಐಪಿಎಲ್ನ ಮೂವರು ಅನ್ಕ್ಯಾಪ್ಡ್ ಆಟಗಾರರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಟಗಾರರು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯದರೆ ಅನ್ಕ್ಯಾಪ್ಡ್ ಪಟ್ಟಿಯಿಂದ ಹೊರಬೀಳಲಿದ್ದಾರೆ.
1 / 7
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೂರು ಪಂದ್ಯಗಳ ಟಿ20 ಸರಣಿ ಭಾನುವಾರದಿಂದ (ಅಕ್ಟೋಬರ್ 6) ಶುರುವಾಗಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಲ್ಲಿ ಮೂವರು ಹೊಸಮುಖಗಳು ಕಾಣಿಸಿಕೊಂಡಿದ್ದಾರೆ. ಅವರೆಂದರೆ ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣ.
2 / 7
ಈ ಮೂವರು ಆಟಗಾರರು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದರೆ ಐಪಿಎಲ್ನ ಅನ್ಕ್ಯಾಪ್ಡ್ ಪಟ್ಟಿಯಿಂದ ಹೊರಬೀಳಲಿದ್ದಾರೆ. ಹೀಗಾಗಿಯೇ ಇದೀಗ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಯಾವ ಆಟಗಾರ ಅನ್ಕ್ಯಾಪ್ಡ್ ಪಟ್ಟ ಕಳಚಲಿದ್ದಾರೆ ಎಂಬುದೇ ಕುತೂಹಲ.
3 / 7
ಏಕೆಂದರೆ ಐಪಿಎಲ್ ನಿಯಮದ ಪ್ರಕಾರ ಭಾರತದ ಪರ ಆಡದ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ 5 ವರ್ಷ ಕಳೆದಿರುವ ಆಟಗಾರರನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಈ ಆಟಗಾರರನ್ನು ಮೆಗಾ ಹರಾಜಿಗೂ ಮುನ್ನ 5+1 ಅಥವಾ 4+2 ಸೂತ್ರದಡಿಯಲ್ಲಿ ರಿಟೈನ್ ಮಾಡಿಕೊಳ್ಳಬಹುದು.
4 / 7
ಅಂದರೆ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಯೊಂದು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಬಯಸಿದರೆ, ಅದರಲ್ಲಿ ಒಬ್ಬರು ಅನ್ಕ್ಯಾಪ್ಡ್ ಆಟಗಾರ ಇರಲೇಬೇಕು. ಇನ್ನು ಗರಿಷ್ಠ ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನು ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಹೀಗೆ ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಉಳಿಸಿಕೊಂಡ ಆಟಗಾರರಿಗೆ ಕೇವಲ 4 ಕೋಟಿ ರೂ. ನೀಡಿದರೆ ಸಾಕು.
5 / 7
ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ವೇಗಿಯಾಗಿರುವ ಮಯಾಂಕ್ ಯಾದವ್ ಅವರು ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ, ಅವರನ್ನು ಉಳಿಸಿಕೊಳ್ಳಬೇಕಿದ್ದರೆ ಎಲ್ಎಸ್ಜಿ ಫ್ರಾಂಚೈಸಿಯು ಕನಿಷ್ಠ 11 ಕೋಟಿ ರೂ. ಪಾವತಿಸಬೇಕಾಗುತ್ತದೆ.
6 / 7
ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ನಿತೀಶ್ ಕುಮಾರ್ ರೆಡ್ಡಿಯನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಿದರೆ 4 ಕೋಟಿ ರೂ. ನೀಡಿದರೆ ಸಾಕಿತ್ತು. ಅದುವೇ ಅವರು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅವರ ಕನಿಷ್ಠ ರಿಟೈನ್ ಮೊತ್ತ 11 ಕೋಟಿ ರೂ. ಆಗಲಿದೆ.
7 / 7
ಇದೇ ನಿಯಮ ಕೆಕೆಆರ್ ವೇಗಿ ಹರ್ಷಿತ್ ರಾಣಗೂ ಅನ್ವಯಿಸುತ್ತದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಳೆದ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಣ ಅವರು ಬಾಂಗ್ಲಾದೇಶ್ ವಿರುದ್ದದ ಸರಣಿಯಲ್ಲಿ ಕಣಕ್ಕಿಳಿದರೆ, ಅವರ ಕನಿಷ್ಠ ರಿಟೈನ್ ಮೊತ್ತ 11 ಕೋಟಿ ರೂ. ಆಗಲಿದೆ. ಹೀಗಾಗಿಯೇ ಮೂರು ಪಂದ್ಯಗಳ ಸರಣಿಯಲ್ಲಿ ಈ ಮೂವರು ಆಟಗಾರರಲ್ಲಿ ಯಾರು ಅನ್ಕ್ಯಾಪ್ಡ್ ಪಟ್ಟ ಕಳಚಿ ಹತ್ತು ಕೋಟಿಗೂ ಅಧಿಕ ಮೊತ್ತ ಗಳಿಸಲಿದ್ದಾರೆ ಕಾದು ನೋಡಬೇಕಿದೆ.