
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಯುವ ಆಟಗಾರ ಅಗ್ನಿ ಚೋಪ್ರಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮನೆಮಾತಾಗಿರುವ ಅಗ್ನಿ ಚೋಪ್ರಾ ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಕೂಡ ಕೇವಲ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ.

ಅಗ್ನಿ ಚೋಪ್ರಾ ಈಗಾಗಲೇ ರೆಡ್ ಬಾಲ್ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 8 ಶತಕಗಳನ್ನು ಬಾರಿಸಿರುವ ಅಗ್ನಿ, 92.11 ಸರಾಸರಿಯೊಂದಿಗೆ 1658 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಅಗ್ನಿಯ ಖರೀದಿಗೆ ಒಂದಷ್ಟು ಫ್ರಾಂಚೈಸಿಗಳು ಆಸಕ್ತಿ ತೋರಲಿದೆ.

ಅದರಲ್ಲೂ ಅಗ್ನಿ ಚೋಪ್ರಾ ಖರೀದಿಗೆ ಗುಜರಾತ್ ಟೈಟಾನ್ಸ್ ಮುಂದಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಅವರೊಂದಿಗಿನ ಗೆಳೆತನ. ಅಂದರೆ ಅಗ್ನಿ ಚೋಪ್ರಾ ಹಾಗೂ ಶುಭ್ಮನ್ ಕ್ಲೋಸ್ ಫ್ರೆಂಡ್ಸ್. ಹೀಗಾಗಿ ಯಾವುದೇ ಫ್ರಾಂಚೈಸಿ ಖರೀದಿಸದೇ ಇದ್ದರೂ, ಗುಜರಾತ್ ಟೈಟಾನ್ಸ್ ಅಗ್ನಿಗಾಗಿ ಬಿಡ್ಡಿಂಗ್ ನಡೆಸುವ ಸಾಧ್ಯತೆಯಿದೆ.

ಅಂದಹಾಗೆ ಅಗ್ನಿ ಚೋಪ್ರಾ ಬಾಲಿವುಡ್ನ ಪ್ರಸಿದ್ಧ ನಿರ್ಮಾಪಕ/ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಪುತ್ರ. ಮುನ್ನಾಭಾಯ್ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯ್, ಪಿಕೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಅದರಲ್ಲೂ ಕಳೆದ ವರ್ಷದ ಬ್ಲಾಕ್ ಬಸ್ಟರ್ ಬಾಲಿವುಡ್ ಚಿತ್ರ 12th ಫೇಲ್ ಚಿತ್ರವನ್ನು ನಿರ್ದೇಶಿಸಿದ್ದು ವಿಧು ವಿನೋದ್ ಚೋಪ್ರಾ. ಅಂದರೆ ತಂದೆ ಬಾಲಿವುಡ್ನಲ್ಲಿ ಹೆಸರು ಮಾಡಿದರೆ, ಮಗ ಅಗ್ನಿ ಚೋಪ್ರಾ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿದ್ದಾರೆ.