
ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2025 ರಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಬಳಿಯೇ ಉತ್ತರವಿಲ್ಲ. ಏಕೆಂದರೆ 18ನೇ ಆವೃತ್ತಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಧೋನಿ ಇನ್ನೂ ಸಹ ಖಚಿತಪಡಿಸಿಲ್ಲ. ಈ ವಿಚಾರವನ್ನು ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಖಾಸಗಿ ಚಾನೆಲ್ವೊಂದರ ಸಂದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರು ಕಾಣಿಸಿಕೊಂಡಿದ್ದರು. ಈ ವೇಳೆ ಮಹೇಂದ್ರ ಸಿಂಗ್ ಧೋನಿ ರಿಟೆನ್ಷನ್ ಬಗ್ಗೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ಧೋನಿ ಇನ್ನೂ ಸಹ ನಮಗೆ ಆಡುವ ಬಗ್ಗೆ ಯಾವುದೇ ಖಚಿತತೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು ಸಿಎಸ್‌ಕೆ ತಂಡದಲ್ಲಿ ಆಡಬೇಕೆಂದು ನಾವು ಬಯಸುತ್ತೇವೆ. ಆದರೆ ಧೋನಿ ಅದನ್ನು ನಮಗೆ ಇನ್ನೂ ಖಚಿತಪಡಿಸಿಲ್ಲ. ಅಲ್ಲದೆ ಅಕ್ಟೋಬರ್ 31ರ ಮೊದಲು ತಿಳಿಸುವುದಾಗಿ ಧೋನಿ ಹೇಳಿದ್ದಾರೆ. ಹೀಗಾಗಿ ನಾವು ಸಹ ಅವರು ನಿಲುವೇನು ಎಂದು ತಿಳಿಯಲು ಕಾಯುತ್ತಿದ್ದೇವೆ ಎಂದು ಸಿಎಸ್‌ಕೆ ಸಿಇಒ ಹೇಳಿದ್ದಾರೆ.

ಇತ್ತ ಐಪಿಎಲ್ ರಿಟೈನ್ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದರೂ ಮಹೇಂದ್ರ ಸಿಂಗ್ ಧೋನಿ ತಮ್ಮ ನಿಲುವನ್ನು ತಿಳಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಅವರು ಮುಂದಿನ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಎಸ್‌ಕೆ ಕೂಡ ಕಾದು ಕುಳಿತಿದೆ.

ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಸೀಸನ್-18 ರಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದನ್ನು ತಿಳಿಯಲು ಈ ತಿಂಗಳಾಂತ್ಯದವರೆಗೂ ಕಾಯಬೇಕಾಗಿ ಬರಬಹುದು. ಹೀಗೆ ಕಾದು ಕಾದು ಸುಸ್ತಾದ ಅಭಿಮಾನಿಗಳಿಗೆ ಅಕ್ಟೋಬರ್ 31ರೊಳಗೆ ಸ್ಪಷ್ಟ ಉತ್ತರವಂತು ಸಿಗಲಿದೆ.