IPL 2025: ಐಪಿಎಲ್ ಸೀಸನ್-18ರ ಮೆಗಾ ಹರಾಜಿಗಾಗಿ 409 ವಿದೇಶಿ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನಾನೂರ ಒಂಭತ್ತು ಆಟಗಾರರಲ್ಲಿ ಇಟಲಿಯ ಯುವ ಕ್ರಿಕೆಟಿಗ ಕೂಡ ಇರುವುದು ವಿಶೇಷ. ಅಂದರೆ ಇದೇ ಮೊದಲ ಬಾರಿಗೆ ಇಟಲಿ ಆಟಗಾರರೊಬ್ಬರು ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೀಡಿದ್ದಾರೆ.
ಹೀಗೆ ಚೊಚ್ಚಲ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿರುವ ಇಟಲಿಯ ಆಟಗಾರನ ಹೆಸರು ಥಾಮಸ್ ಜ್ಯಾಕ್ ಡ್ರಾಕಾ. 24 ವರ್ಷದ ಥಾಮಸ್ ಜ್ಯಾಕ್ ಈ ಹಿಂದೆ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಕೆನಡಾ ಟಿ20 ಲೀಗ್ನಲ್ಲೂ ಕಣಕ್ಕಿಳಿದಿದ್ದಾರೆ.
ಇಟಲಿ ಪರ ಈಗಾಗಲೇ 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಥಾಮಸ್ ಜ್ಯಾಕ್ ಡ್ರಾಕಾ ಒಟ್ಟು 8 ವಿಕೆಟ್ ಕಬಳಿಸಿದ್ದಾರೆ. ಇದೀಗ ಥಾಮಸ್ ಜ್ಯಾಕ್ ಐಪಿಎಲ್ನಲ್ಲಿ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದು, ಅದರಂತೆ ಅಸೋಸಿಯೇಟ್ ನೇಷನ್ಸ್ ಆಟಗಾರರ ವಿಭಾಗದಲ್ಲಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಅತ್ತ ಈ ಹಿಂದೆ ಯುಎಇನ ಇಂಟರ್ನ್ಯಾಷನಲ್ ಲೀಗ್ ಟಿ20 ಯಲ್ಲಿ ಎಂಐ ಎಮಿರೇಟ್ಸ್ ತಂಡದಲ್ಲಿ ಕಾಣಿಸಿಕೊಂಡಿರುವ ಕಾರಣ ಯುವ ಆಟಗಾರನನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಲಿದೆಯಾ ಎಂಬುದೇ ಕುತೂಹಲ.
ಇನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಈ ಹರಾಜು ಪ್ರಕ್ರಿಯೆಗೆ ಸೌದಿ ಅರೇಬಿಯಾದ ಜಿದ್ಧಾದ ಅಬಾದಿ ಅಲ್ ಜೋಹರ್ ಅರೇನಾ ಆತಿಥ್ಯವಹಿಸಲಿದೆ. ಈ ಹರಾಜಿನ ಮೂಲಕ ಥಾಮಸ್ ಜ್ಯಾಕ್ ಡ್ರಾಕಾಗೆ ಐಪಿಎಲ್ನಲ್ಲಿ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.
Published On - 11:54 am, Wed, 6 November 24