
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಮಿಚೆಲ್ ಸ್ಟಾರ್ಕ್ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನು ಆ್ಯಂಡ್ರೆ ರಸೆಲ್ ಜೊತೆ ಮಾತುಕತೆ ನಡೆಸಿದ್ದು, ಕೊನೆಯ ಕ್ಷಣದಲ್ಲಿ ರಿಟೈನ್ ಆಗುವ ಸಾಧ್ಯತೆಯಿದೆ.

ಕ್ರಿಕ್ಬಝ್ ಮೂಲಗಳ ಮಾಹಿತಿ ಪ್ರಕಾರ, ಶ್ರೇಯಸ್ ಅಯ್ಯರ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಬರಲು ನಿರ್ಧರಿಸಿದ್ದಾರೆ. ಕೊನೆಯ ಹಂತದವರೆಗೆ ಅಯ್ಯರ್ ಜೊತೆ ಕೆಕೆಆರ್ ಮಾತುಕತೆ ನಡೆಸಿದ್ದು, ಆದರೆ ಇದು ಫಲಪ್ರದವಾಗಿಲ್ಲ. ಹೀಗಾಗಿ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ನಿರ್ಧರಿಸಿದೆ.

ಹಾಗೆಯೇ ಆ್ಯಂಡ್ರೆ ರಸೆಲ್ ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಬರಲು ನಿರ್ಧರಿಸಿದ್ದಾರೆ. ಆದರೆ ಅತ್ತ ಕೆಕೆಆರ್ ಫ್ರಾಂಚೈಸಿಯು ಹಿರಿಯ ಆಲ್ರೌಂಡರ್ನನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದ್ದು, ಇದಕ್ಕಾಗಿ ತೆರೆಮರೆಯ ಪ್ರಯತ್ನ ಮುಂದುವರೆಸಿದೆ. ಹೀಗಾಗಿ ಅಂತಿಮ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ವರದಿಯಾಗಿದೆ.

ಇನ್ನು ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು 24.75 ಕೋಟಿ ರೂ. ನೀಡಿ ಖರೀದಿಸಿದ್ದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಬಿಡುಗಡೆ ಮಾಡಲು ಕೆಕೆಆರ್ ನಿರ್ಧರಿಸಿದೆ. ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ಕ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಅದರಂತೆ ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಶ್ರೇಯಸ್ ಅಯ್ಯರ್ ಹಾಗೂ ಮಿಚೆಲ್ ಸ್ಟಾರ್ಕ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಈ ಹರಾಜಿನ ಮೂಲಕ ಈ ಇಬ್ಬರು ಯಾವ ತಂಡದ ಪಾಲಾಗಲಿದ್ದಾರೆ ಕಾದು ನೋಡಬೇಕಿದೆ.
Published On - 10:53 am, Thu, 31 October 24