
ಟೀಮ್ ಇಂಡಿಯಾದ ಸ್ವಿಂಗ್ ಕಿಂಗ್ ಎಂದೇ ಗುರುತಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್ಸಿಬಿ ಫ್ರಾಂಚೈಸಿ ಭುವಿಯನ್ನು ಬರೋಬ್ಬರಿ 10.75 ರೂ.ಗೆ ಖರೀದಿಸಿದೆ.

ಈ ಹಿಂದೆ ಪುಣೆ ವಾರಿಯರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಭುವನೇಶ್ವರ್ ಕುಮಾರ್ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆಯೊಂದಿಗೆ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಈ ದಾಖಲೆಯನ್ನು ಮುಂದುವರೆಸಿದ ಆರ್ಸಿಬಿ ಪರ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಹಾಗಿದ್ರೆ ಭುವಿ ಹೆಸರಿನಲ್ಲಿರುವ ಐಸಿಸಿ ರೆಕಾರ್ಡ್ಗಳಾವುವು ಎಂದು ನೋಡೋಣ…

ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗಿ ಎಂಬ ದಾಖಲೆ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 173 ಪಂದ್ಯಗಳಲ್ಲಿ ಮೊದಲ 6 ಓವರ್ಗಳಲ್ಲಿ ಚೆಂಡೆಸೆದಿರುವ ಭುವಿ ಒಟ್ಟು 74 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪವರ್ಪ್ಲೇನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೇಡನ್ ಓವರ್ ಎಸೆದ ಬೌಲರ್ ಎಂಬ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 176 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಭುವಿ 14 ಮೇಡನ್ ಓವರ್ ಎಸೆದು ಈ ಭರ್ಜರಿ ದಾಖಲೆ ಬರೆದಿದ್ದಾರೆ.

ಡೆತ್ ಓವರ್ಗಳಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಭಾರತೀಯ ವೇಗಿ ಎಂಬ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 139 ಪಂದ್ಯಗಳಲ್ಲಿ ಕೊನೆಯ 5 ಓವರ್ಗಳಲ್ಲಿ ಬೌಲಿಂಗ್ ಮಾಡಿರುವ ಭುವಿ ಒಟ್ಟು 85 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಯಶಸ್ವಿ ಡೆತ್ ಓವರ್ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. ಐಪಿಎಲ್ನಲ್ಲಿ ಈವರೆಗೆ 3910 ಎಸೆತಗಳನ್ನು ಎಸೆದಿರುವ ಭುವಿ 1670 ಎಸೆತಗಳಲ್ಲಿ ಯಾವುದೇ ರನ್ ನೀಡಿಲ್ಲ ಎಂಬುದು ವಿಶೇಷ.

ಅಂದರೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ, ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಪಡೆದ, ಅತೀ ಹೆಚ್ಚು ಮೇಡನ್ ಓವರ್ಗಳನ್ನು ಎಸೆದ ದಾಖಲೆಗಳೊಂದಿಗೆ ಭುವನೇಶ್ವರ್ ಕುಮಾರ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ದಾಖಲೆಗಳನ್ನು ಮುಂದುವರೆಸುವ ಮೂಲಕ ಅವರು ಆರ್ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದು ಕೊಡಲಿದ್ದಾರಾ ಕಾದು ನೋಡಬೇಕಿದೆ.