
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರ ಮೆಗಾ ಹರಾಜಿಗೂ ಮುನ್ನ ಕೆಲ ಬಿಗ್ ಅಪ್ಡೇಟ್ಗಳು ಹೊರಬೀಳುತ್ತಿವೆ. ಈ ಅಪ್ಡೇಟ್ಗಳಲ್ಲಿ ಪ್ರಮುಖವಾದವು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಮುಂದಿನ ನಡೆ. ಅಂದರೆ ಐಪಿಎಲ್ 2025 ರಲ್ಲಿ ಸೂರ್ಯ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲ್ಲ ಎಂದು ಹೇಳಲಾಗುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದಿಂದ ಸೂರ್ಯಕುಮಾರ್ ಯಾದವ್ ಹೊರಬರಲು ನಿರ್ಧರಿಸಿದ್ದು, ಅದರಂತೆ ಮುಂದಿನ ಸೀಸನ್ನ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಒಂದು ಕಾರಣ ಕಳೆದ ಸೀಸನ್ನಲ್ಲಿ ಮುಂಬೈ ಫ್ರಾಂಚೈಸಿ ಸೂರ್ಯನನ್ನು ಸೈಡ್ಗಿರಿಸಿದ್ದು. ಅಂದರೆ ರೋಹಿತ್ ಶರ್ಮಾ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯ ತನಗೆ ಸಿಗಲಿದೆ ಎಂದು ಸೂರ್ಯಕುಮಾರ್ ಭಾವಿಸಿದ್ದರು.

ಆದರೆ ಮುಂಬೈ ಇಂಡಿಯನ್ಸ್ ತಂಡದಿಂದ ಹೊರನಡೆದಿದ್ದ ಹಾರ್ದಿಕ್ ಪಾಂಡ್ಯರನ್ನು ಮತ್ತೆ ತಂಡಕ್ಕೆ ಕರೆತರುವ ಮೂಲಕ ನಾಯಕತ್ವ ನೀಡಲಾಗಿತ್ತು. ಫ್ರಾಂಚೈಸಿಯ ಈ ನಿರ್ಧಾರದಿಂದ ಸೂರ್ಯಕುಮಾರ್ ಅವರಲ್ಲಿ ಅಸಮಾಧಾನವಿದೆ. ಇದೇ ಕಾರಣದಿಂದಾಗಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ರಿಟೈನ್ ಆಗದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಹೊಸ ನಾಯಕರುಗಳ ಆಯ್ಕೆಗೆ ಆಸಕ್ತಿ ಹೊಂದಿವೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ಹೊಸ ತಂಡವೊಂದಕ್ಕೆ ನಾಯಕರಾಗಿ ಆಯ್ಕೆಯಾಗುವುದು ಖಚಿತ ಎನ್ನಬಹುದು.

ಇದೇ ಕಾರಣದಿಂದಾಗಿ ಇದೀಗ ಸೂರ್ಯಕುಮಾರ್ ಯಾದವ್ ಬೃಹತ್ ಮೊತ್ತದ ಬಿಡ್ಡಿಂಗ್ನೊಂದಿಗೆ ಹೊಸ ತಂಡದ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸೂರ್ಯ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದು, ಹೊಸ ತಂಡದ ಪಾಲಾದರೂ ಅಚ್ಚರಿಪಡಬೇಕಿಲ್ಲ.