- Kannada News Photo gallery Cricket photos IPL 2025: Team India Former Player Zaheer Khan to join LSG as mentor
IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಝಹೀರ್ ಖಾನ್ ಎಂಟ್ರಿ
ಟೀಮ್ ಇಂಡಿಯಾ ಪರ ಝಹೀರ್ ಖಾನ್ 17 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 352 ಎಸೆತಗಳನ್ನು ಎಸೆದಿರುವ ಝಾಕ್ 448 ರನ್ಗಳನ್ನು ನೀಡಿ 17 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್ನಲ್ಲಿ 100 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಎಡಗೈ ವೇಗಿ ಒಟ್ಟು 102 ವಿಕೆಟ್ ಪಡೆದಿದ್ದಾರೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
Updated on:Aug 28, 2024 | 10:53 AM

ಟೀಮ್ ಇಂಡಿಯಾದ ಮಾಜಿ ವೇಗಿ ಝಹೀರ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗದಲ್ಲಿ ಕಾಣಿಸಿಕೊಂಡಿದ್ದ ಝಹೀರ್ ಖಾನ್ ಇದೀಗ ಹೊಸ ಹುದ್ದೆಯೊಂದಿಗೆ ಐಪಿಎಲ್ಗೆ ಮರಳುತ್ತಿರುವುದು ವಿಶೇಷ.

2018 ರಿಂದ 2022 ರವರೆಗೆ, ಝಹೀರ್ ಖಾನ್ ಮುಂಬೈ ಇಂಡಿಯನ್ಸ್ (MI) ತಂಡದ ನಿರ್ದೇಶಕರಾಗಿ ಮತ್ತು ಆ ಬಳಿಕ ಜಾಗತಿಕ ಅಭಿವೃದ್ಧಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಂಡಿದ್ದರು.

ಇದೀಗ ಗೌತಮ್ ಗಂಭೀರ್ ಅವರಿಂದ ತೆರವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹುದ್ದೆಗೆ ಝಹೀರ್ ಖಾನ್ ಅವರನ್ನು ನೇಮಿಸಲಾಗಿದೆ. ಗಂಭೀರ್ ಐಪಿಎಲ್ 2022-23 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ 2024 ರಲ್ಲಿ ಲಕ್ನೋ ಫ್ರಾಂಚೈಸಿಯನ್ನು ತೊರೆದಿದ್ದ ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು.

ಇನ್ನು ಝಹೀರ್ ಖಾನ್ ಆಯ್ಕೆ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 2 ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆಯಿದೆ. ಈಗಾಗಲೇ ಮೆಂಟರ್ ಆಗಿ ಆಯ್ಕೆಯಾಗಿರುವ ಝಾಕ್, ಎಲ್ಎಸ್ಜಿ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಭಾರತ ಕಂಡಂತಹ ಅತ್ಯುತ್ತಮ ವೇಗಿಗಳಲ್ಲಿ ಝಹೀರ್ ಖಾನ್ ಕೂಡ ಒಬ್ಬರು. ಅಲ್ಲದೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಮೆಂಟರ್ ಹುದ್ದೆಯೊಂದಿಗೆ ಝಹೀರ್ ಖಾನ್ ಬೌಲಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ.

ಅಂದಹಾಗೆ ಝಹೀರ್ ಖಾನ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ ಒಟ್ಟು 100 ಪಂದ್ಯಗಳನ್ನಾಡಿರುವ ಅವರು ಒಟ್ಟು 102 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಪರ ಕೋಚಿಂಗ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮೆಂಟರ್ ಹುದ್ದೆಯೊಂದಿಗೆ ಐಪಿಎಲ್ 2025 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published On - 10:00 am, Wed, 28 August 24
