
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಐಪಿಎಲ್ ಮೆಗಾ ಹರಾಜಿಗಾಗಿ ರಿಟೆನ್ಷನ್ ನಿಯಮಗಳನ್ನು ಪ್ರಕಟಿಸಲಾಗಿದೆ. ಇನ್ನು ಅಕ್ಟೋಬರ್ 31 ರೊಳಗೆ ಎಲ್ಲಾ ತಂಡಗಳು ರಿಟೈನ್ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದಾದ ಬಳಿಕ ಮೆಗಾ ಆಕ್ಷನ್ ನಡೆಯಲಿದೆ.

ಈ ಮೆಗಾ ಆಕ್ಷನ್ನೊಂದಿಗೆ ಪ್ರತಿ ತಂಡಗಳು ಬದಲಾಗಲಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಇಲ್ಲಿ ಆರ್ಸಿಬಿ ಹೊಸ ಪಡೆಯನ್ನು ರೂಪಿಸಿದರೂ ತಂಡದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಆರ್ಸಿಬಿ ಟ್ರೋಫಿ ಗೆದ್ದರೆ ಅದು ಕಿಂಗ್ ಕೊಹ್ಲಿಯ ಮೊದಲ ಐಪಿಎಲ್ ಕಿರೀಟವಾಗಿರಲಿದೆ.

ಅಂತಹದೊಂದು ಅಪೂರ್ಣ ಕ್ಷಣಗಳನ್ನು ಎದುರು ನೋಡುತ್ತಿದ್ದಾರೆ ಆರ್ಸಿಬಿ ತಂಡದ ಮಾಜಿ ಆಟಗಾರ ಡೇನಿಯಲ್ ಕ್ರಿಶ್ಚಿಯನ್. ಈ ಹಿಂದೆ ಆರ್ಸಿಬಿ ಪರ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ಆಟಗಾರ, ವಿರಾಟ್ ಕೊಹ್ಲಿ ಈ ಬಾರಿಯಾದರೂ ಕಪ್ ಎತ್ತಿ ಹಿಡಿಯಲಿ ಎಂದು ಆಶಿಸಿದ್ದಾರೆ. ಅಲ್ಲದೆ ಐಪಿಎಲ್ ಟ್ರೋಫಿ ಗೆಲ್ಲಲು ಕೊಹ್ಲಿ ಅರ್ಹರು ಎಂದು ತಿಳಿಸಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡೇನಿಯಲ್ ಕ್ರಿಶ್ಚಿಯನ್, ಪ್ರತಿ ಸೀಸನ್ನಲ್ಲೂ ವಿರಾಟ್ ಕೊಹ್ಲಿ ತಂಡಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಆದರೆ ದುರಾದೃಷ್ಟವಶಾತ್ ಆರ್ಸಿಬಿಗೆ ಫೈನಲ್ ಗೆಲ್ಲಲು ಸಾಧ್ಯವಾಗಿಲ್ಲ. ಒಂದಾರ್ಥದಲ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಖಂಡಿತವಾಗಿಯೂ ವಿರಾಟ್ ಕೊಹ್ಲಿ ಅರ್ಹರು. ಪಾಪ.. ಆ ಅದೃಷ್ಟ ಅವರಿಗೆ ಒಲಿದಿಲ್ಲ ಎಂದು ಆಸೀಸ್ ಆಟಗಾರ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅದ್ಭುತ ವೃತ್ತಿಜೀವನವನ್ನು ಹೊಂದಿದ್ದಾರೆ. ಅಲ್ಲದೆ ಅತ್ಯಂತ ಯಶಸ್ವಿ ಆಟಗಾರ. ಭಾರತಕ್ಕಾಗಿ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ. ಹೀಗಾಗಿ ಈ ಸಲ ಆರ್ಸಿಬಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ವಿರಾಟ್ ಕೊಹ್ಲಿಯ ಬಹುಕಾಲದ ಕನಸು ನನಸಾಗಲಿ ಎಂದು ಡೇನಿಯಲ್ ಕ್ರಿಶ್ಚಿಯನ್ ಹೇಳಿದ್ದಾರೆ. ಆರ್ಸಿಬಿ ತಂಡದ ಮಾಜಿ ಆಟಗಾರನ ಹೇಳಿಕೆಯಂತೆ ಈ ಸಲ ಕಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಲಿದೆಯಾ ಕಾದು ನೋಡಬೇಕಿದೆ.