
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಐಪಿಎಲ್ನಲ್ಲಿ (IPL 2025) ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಅದು ಸಹ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2025 ರಲ್ಲಿ ಯುವರಾಜ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈಗಾಗಲೇ ಯುವರಾಜ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ಯುವಿ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಮುಂಬರುವ ಐಪಿಎಲ್ನಲ್ಲಿ ಯುವರಾಜ್ ಸಿಂಗ್ ಡಿಸಿ ತಂಡದ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದಕ್ಕೂ ಮುನ್ನ ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಗುಜರಾತ್ ತಂಡದ ಪ್ರಸ್ತುತ ಕೋಚ್ ಆಶಿಶ್ ನೆಹ್ರಾ ಜಿಟಿ ತಂಡವನ್ನು ತೊರೆಯಲಿದ್ದು, ಅವರ ಸ್ಥಾನದಲ್ಲಿ ಯುವರಾಜ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಆದರೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ನನ್ನು ಕರೆತರುವ ಯತ್ನದಲ್ಲಿದ್ದಾರೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ಕಾರ್ಯ ನಿರ್ವಹಿಸಿದ್ದರು. ಆದರೆ ಕೆಲ ತಿಂಗಳ ಹಿಂದೆಯಷ್ಟೇ ಅವರನ್ನು ಕೋಚ್ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದೀಗ ಅವರ ಸ್ಥಾನದಲ್ಲಿ ಯುವರಾಜ್ ಸಿಂಗ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಯುವರಾಜ್ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್‌ನಲ್ಲಿ ಯಾವುದೇ ಪೂರ್ವ ಕೋಚಿಂಗ್ ಅನುಭವ ಹೊಂದಿಲ್ಲ. ಇದಾಗ್ಯೂ ಅವರು ಪಂಜಾಬ್ನ ಯುವ ಆಟಗಾರಿಗೆ ವಿಶೇಷ ತರಬೇತಿಗಳನ್ನು ನೀಡುತ್ತಿದ್ದರು. ಹೀಗೆ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ ಇದೀಗ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಅಲ್ಲದೆ ಈ ಹಿಂದೆ 2007ರ ಮತ್ತು 2011 ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಈ ಎಲ್ಲಾ ಕಾರಣಗಳಿಂದ ಚಾಂಪಿಯನ್ ಕ್ರಿಕೆಟಿಗನನ್ನು ಕೋಚ್ ಆಗಿ ನೇಮಿಸಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಂದಾಗಿದೆ.

ಅಂದಹಾಗೆ ಯುವರಾಜ್ ಸಿಂಗ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಪರ ಕೂಡ ಆಡಿದ್ದರು. 2015 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿಯು ಯುವಿಯನ್ನು ಬರೋಬ್ಬರಿ 16 ಕೋಟಿ ರೂ.ಗೆ ಖರೀದಿಸಿತ್ತು. ಇದೀಗ ತನ್ನ ಮಾಜಿ ಆಟಗಾರನನ್ನೇ ಕೋಚ್ ಆಗಿ ನೇಮಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿರುವುದು ವಿಶೇಷ.