
IPL 2025: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 89 ರನ್ ಬಾರಿಸಿ ಮಿಂಚಿದ್ದ ಕನ್ನಡಿಗ ಕರುಣ್ ನಾಯರ್ (Karun Nair) ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಮುಗ್ಗರಿಸಿದ್ದಾರೆ. ಅದು ಸಹ ತನ್ನದೇ ತಪ್ಪಿನಿಂದಾಗಿ ಎಂಬುದು ವಿಶೇಷ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಜೇಕ್ ಫ್ರೇಸರ್ ಮೆಕ್ಗುರ್ಕ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಆದರೆ ಕೇವಲ 9 ರನ್ ಬಾರಿಸಿ ಜೇಕ್ ಫ್ರೇಸರ್ ಮೆಕ್ಗುರ್ಕ್ ಮೂರನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಸ್ಟ್ರೈಕ್ನಲ್ಲಿದ್ದ ಅಭಿಷೇಕ್ ಪೊರೆಲ್ ಓಡಬೇಡಿ ಎಂದರೂ ರನ್ಗಾಗಿ ಕರುಣ್ ಕ್ರೀಸ್ ಬಿಟ್ಟಿದ್ದರು.

ಸ್ಟ್ರೈಕ್ನಲ್ಲಿದ್ದ ಬ್ಯಾಟರ್ನ ಸೂಚನೆಯನ್ನು ನೋಡದೇ ಅವಸರದಲ್ಲಿ ಅದಾಗಲೇ ಕ್ರೀಸ್ ಬಿಟ್ಟಿದ್ದ ಕರುಣ್ ನಾಯರ್ ಮತ್ತೆ ನಾನ್ ಸ್ಟ್ರೈಕ್ಗೆ ತಲುಪುವಷ್ಟರಲ್ಲಿ ಸಂದೀಪ್ ಶರ್ಮಾ ರನೌಟ್ ಮಾಡಿದರು. ಪರಿಣಾಮ ಶೂನ್ಯದೊಂದಿಗೆ ಕರುಣ್ ನಾಯರ್ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು.

ಪೆವಿಲಿಯನ್ನತ್ತ ಬಂದ ಕರುಣ್ ನಾಯರ್ ನೇರವಾಗಿ ಡ್ರೆಸ್ಸಿಂಗ್ಗೆ ರೂಮ್ಗೆ ತೆರಳಿದ್ದಾರೆ. ಅಲ್ಲದೆ ತನ್ನ ಕೋಪ ತಾಪಗಳನ್ನು ತೀರಿಸಿಕೊಂಡಿದ್ದಾರೆ. ತಾಳ್ಮೆ ಕಳೆದುಕೊಂಡು ಡ್ರೆಸ್ಸಿಂಗ್ ರೂಮ್ನಲ್ಲಿ ತನ್ನ ಗ್ಲೌಸ್, ಬ್ಯಾಟ್ಗಳನ್ನು ಎಸೆಯುವ ಮೂಲಕ ಸಿಟ್ಟು ಹೊರಹಾಕುತ್ತಿರುವ ಕರುಣ್ ನಾಯರ್ ಅವರ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 188 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದಾರೆ. ಅದರಂತೆ ಸೂಪರ್ ಓವರ್ನತ್ತ ಸಾಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಆರ್ 11 ರನ್ ಕಲೆಹಾಕಿದರೆ, ಸೂಪರ್ ಓವರ್ನ ಮೊದಲ 4 ಎಸೆತಗಳಲ್ಲಿ 13 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ಪಂದವನ್ನು ಗೆದ್ದುಕೊಂಡಿದೆ.