
2025 ರ ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಪರ್ ಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ರಿಷಬ್ ಪಂತ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಲಕ್ನೋ ತಂಡ ಲೀಗ್ ಆರಂಭಕ್ಕೂ ಮುನ್ನವೇ ಸ್ಟಾರ್ ಆಟಗಾರನ ಅಲಭ್ಯತೆಯ ಭಯಕ್ಕೀಡಾಗಿತ್ತು. ಆದರೀಗ ಆ ಸ್ಟಾರ್ ಆಟಗಾರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಐಪಿಎಲ್‌ಗೆ ಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೊ ಪ್ರಕಾರ, ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಇದೀಗ ಇಂಜುರಿಯಿಂದ ಚೇತರಿಸಿಕೊಂಡಿದ್ದು, ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಇಷ್ಟು ದಿನ ಅವರ ಅಲಭ್ಯತೆಯ ಬಗ್ಗೆ ಚಿಂತೆಗೀಡಾಗಿದ್ದ ಲಕ್ನೋ ತಂಡಕ್ಕೆ ಆನೆ ಬಲ ಬಂದಂತ್ತಾಗಿದೆ. ಆದರೆ ಮಾರ್ಷ್ ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದಉ ವರದಿಯಾಗಿದೆ.

ವಾಸ್ತವವಾಗಿ 2025 ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಿಚೆಲ್ ಮಾರ್ಷ್ ಗಾಯಗೊಂಡಿದ್ದರು. ಇದರಿಂದಾಗಿ ಅವರು 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಕಳೆದುಕೊಳ್ಳಬೇಕಾಯಿತು. ಹಲವು ತಿಂಗಳುಗಳ ಕಾಲ ಕ್ರಿಕೆಟ್ ಚಟುವಟಿಕೆಯಿಂದ ದೂರ ಉಳಿದಿದ್ದ ಮಾರ್ಷ್ ಈಗ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಮಾರ್ಷ್ ಕಳೆದ ಸೀಸಿನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.

ಇದೀಗ ಲಕ್ನೋ ತಂಡವನ್ನು ಸೇರಿಕೊಂಡಿರುವ ಮಾರ್ಷ್ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಇದುವರೆಗೆ ಆಡಿರುವ 42 ಪಂದ್ಯಗಳಲ್ಲಿ 19.55 ಸರಾಸರಿಯಲ್ಲಿ 3 ಅರ್ಧಶತಕಗಳನ್ನು ಒಳಗೊಂಡಂತೆ 665 ರನ್ ಗಳಿಸಿದ್ದಾರೆ. ಆದರೆ, ಕಳೆದ ಸೀಸನ್ನಲ್ಲಿ ಕಳಪೆ ಫಾರ್ಮ್ಗೆ ತುತ್ತಾಗಿದ್ದ ಮಾರ್ಷ್, ಆಡಿದ 4 ಪಂದ್ಯಗಳಲ್ಲಿ ಕೇವಲ 61 ರನ್ ಗಳಿಸಿದರು ಮತ್ತು ಬೌಲಿಂಗ್‌ನಲ್ಲೂ ಸಪ್ಪೆ ಪ್ರದರ್ಶನ ನೀಡಿದ್ದರು.

ಲಕ್ನೋ ತಂಡ: ರಿಷಬ್ ಪಂತ್ (ನಾಯಕ), ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್‌ರಾಮ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಅವೇಶ್ ಖಾನ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಸ್ನೋಯ್, ಅಬ್ದುಲ್ ಸಮದ್, ಆರ್ಯನ್ ಜುಯಲ್, ಆಕಾಶ್ ದೀಪ್, ಹಿಮ್ಮತ್ ಸಿಂಗ್, ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಶಹಬಾಜ್ ಅಹ್ಮದ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ಮ್ಯಾಥ್ಯೂ ಬ್ರೀಟ್ಜ್ಕೆ