ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಆದರೆ ಅದಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದಿಂದ ಅಫ್ಘಾನಿಸ್ತಾನ್ ಸ್ಪಿನ್ನರ್ ಅಲ್ಲಾ ಗಝನ್‌ಫರ್ ಹೊರಗುಳಿದಿದ್ದಾರೆ. ಗಾಯಗೊಂಡು ಹೊರನಡೆದಿರುವ ಅಲ್ಲಾ ಗಝನ್‌ಫರ್ ಬದಲಿಗೆ ಇದೀಗ ಮುಂಬೈ ಇಂಡಿಯನ್ಸ್ ಮತ್ತೊರ್ವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಅಲ್ಲಾ ಗಝನ್‌ಫರ್ ಅವರನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬರೋಬ್ಬರಿ 4.80 ಕೋಟಿ ರೂ. ನೀಡಿ ಖರೀದಿಸಿತ್ತು. ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ರಣತಂತ್ರ ರೂಪಿಸಲೆಂದೇ ಖರೀದಿಸಲಾಗಿದ್ದ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಮುಂಬರುವ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇತ್ತ ಅಲ್ಲಾ ಗಝನ್‌ಫರ್ ಹೊರಗುಳಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅನುಭವಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. 23 ವರ್ಷದ ಮುಜೀಬ್ ಈ ಹಿಂದೆ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಕಣಕ್ಕಿಳಿದಿದ್ದರು.
ಐಪಿಎಲ್ನಲ್ಲಿ ಒಟ್ಟು 19 ಪಂದ್ಯಗಳನ್ನಾಡಿರುವ ಮುಜೀಬ್ ಉರ್ ರೆಹಮಾನ್ ಒಟ್ಟು 19 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅಫ್ಘಾನ್ ಸ್ಪಿನ್ನರ್ ಬಿಕರಿಯಾಗದೇ ಉಳಿದಿದ್ದಾರೆ. ಇದೀಗ ಅಲ್ಲಾ ಗಝನ್‌ಫರ್ ಹೊರಗುಳಿಯುತ್ತಿರುವುದರಿಂದ ಮುಜೀಬ್ ಉರ್ ರೆಹಮಾನ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಝ್, ಕರ್ಣ್ ಶರ್ಮಾ, ದೀಪಕ್ ಚಹರ್, ರೀಸ್ ಟೋಪ್ಲಿ, ರಿಯಾನ್ ರಿಕೆಲ್ಟನ್, ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮಾ, ರಾಜ್ವ ಶರ್ಮಾ, ಸತ್ಯನಾರಾಯಣ ರಾಜು, ರಾಜ್ ಬಾವ, ಕೃಷ್ಣನ್ ಶ್ರೀಜಿತ್, ಅಶ್ವಾಣಿ ಕುಮಾರ್, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಝಾಡ್ ವಿಲಿಯಮ್ಸ್, ಮುಜೀಬ್ ಉರ್ ರೆಹಮಾನ್.