
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಉಳಿದ ಪಂದ್ಯಗಳು ಶನಿವಾರದಿಂದ (ಮೇ 17) ಶುರುವಾಗಲಿದೆ. ಆದರೆ ಈ ಪಂದ್ಯಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಯುವ ದಾಂಡಿಗ ಜೇಕ್ ಫ್ರೇಸರ್ ಮೆಕ್ಗುರ್ಕ್ ಅಲಭ್ಯರಾಗಿದ್ದಾರೆ. ಹೀಗಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬದಲಿ ಆಟಗಾರನಾಗಿ ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಈ ಆಯ್ಕೆಯ ಹೊರತಾಗಿಯೂ ಮುಸ್ತಫಿಝುರ್ ರೆಹಮಾನ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಸಹ ಖಚಿತವಾಗಿಲ್ಲ. ಏಕೆಂದರೆ ಇತ್ತ ಐಪಿಎಲ್ಗೆ ಆಯ್ಕೆಯಾದ ಬೆನ್ನಲ್ಲೇ ಮುಸ್ತಫಿಝುರ್ ದುಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಅದು ಕೂಡ UAE ವಿರುದ್ಧ ಟಿ20 ಸರಣಿ ಆಡಲು. ಮೇ 17 ರಿಂದ ಬಾಂಗ್ಲಾದೇಶ್ ಹಾಗೂ ಯುಎಇ ನಡುವೆ 2 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಮುಸ್ತಫಿಝುರ್ ರೆಹಮಾನ್ ಇದ್ದಾರೆ. ಯುಎಇ ವಿರುದ್ಧದ ಪಂದ್ಯಗಳ ಬಳಿಕ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವೆ 5 ಮ್ಯಾಚ್ಗಳ ಟಿ20 ಸರಣಿ ನಡೆಯಲಿದೆ. ಈ ಸರಣಿ ಶುರುವಾಗುವುದು ಮೇ 25 ರಿಂದ. ಜೂನ್ 3 ರಂದು ಈ ಸರಣಿಯ ಕೊನೆಯ ಪಂದ್ಯವಾಡಲಿದ್ದಾರೆ.

ಅಂದರೆ ಐಪಿಎಲ್ನ ಫೈನಲ್ವರೆಗೆ ಮುಸ್ತಫಿಝುರ್ ರೆಹಮಾನ್ ಬಾಂಗ್ಲಾದೇಶ್ ತಂಡದಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯ. ಇದೇ ಕಾರಣದಿಂದಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್, ಮುಸ್ತಫಿಝುರ್ ರೆಹಮಾನ್ಗೆ ಐಪಿಎಲ್ ಆಡಲು ಇನ್ನೂ ಸಹ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ನೀಡಿಲ್ಲ.

ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾದರೂ ಮುಸ್ತಫಿಝುರ್ ರೆಹಮಾನ್ ಐಪಿಎಲ್ ಆಡುತ್ತಾರೊ, ಇಲ್ಲವೊ ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಒಂದು ವೇಳೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಯುಎಇ ಸರಣಿ ಬಳಿಕ ಅವರಿಗೆ ಎನ್ಒಸಿ ನೀಡಿದರೆ ಮೇ 20 ರಂದು ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಳ್ಳಬಹುದು. ಆದರೆ ಪಾಕ್ ವಿರುದ್ಧದ ಸರಣಿಯಿಂದ ಪ್ರಮುಖ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಬಿಸಿಬಿ ಹೊರಗಿಡುತ್ತಾ ಎಂಬುದೇ ಈಗ ದೊಡ್ಡ ಪ್ರಶ್ನೆ.