
IPL 2025: ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿದ 11 ಪಂದ್ಯಗಳಲ್ಲಿ 7 ಜಯ ಹಾಗೂ ಒಂದು ಡ್ರಾನೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಒಟ್ಟು 15 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ವಿಶೇಷ ಎಂದರೆ ಪಂಜಾಬ್ ಕಿಂಗ್ಸ್ ತಂಡವು ಬರೋಬ್ಬರಿ 11 ವರ್ಷಗಳ ಬಳಿಕ 15 ಅಂಕಗಳನ್ನು ಪಡೆದುಕೊಂಡಿದೆ. ಅಂದರೆ ಕಳೆದ ಹನ್ನೊಂದು ಸೀಸನ್ಗಳಲ್ಲಿ 14 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯಲು ಪಂಜಾಬ್ ಪಡೆಗೆ ಸಾಧ್ಯವಾಗಿಲ್ಲ. 2014 ರಲ್ಲಿ 22 ಅಂಕಗಳನ್ನು ಪಡೆದಿದ್ದೇ ಶ್ರೇಷ್ಠ ಸಾಧನೆ.

ಇದಾದ ಬಳಿಕ ಒಮ್ಮೆಯೂ ಪಂಜಾಬ್ ಕಿಂಗ್ಸ್ ತಂಡ 7 ಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದಿರಲಿಲ್ಲ ಎಂದರೆ ನಂಬಲೇಬೇಕು. ಆದರೆ ಈ ಬಾರಿಯ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಇದರೊಂದಿಗೆ ಒಟ್ಟು 15 ಅಂಕಗಳನ್ನು ಪಡೆದು ಪಂಜಾಬ್ ಪಡೆ ಪ್ಲೇಆಫ್ನತ್ತ ಲಗ್ಗೆಯಿಟ್ಟಿದೆ.

ಇನ್ನು 2014ರ ಬಳಿಕ ಪಂಜಾಬ್ ಕಿಂಗ್ಸ್ ಪಾಲಿಗೆ ಮರೀಚಿಕೆಯಾಗಿರುವ ಪ್ಲೇಆಫ್ ಸುತ್ತಿಗೇರಲು ಇನ್ನೂ 3 ಪಂದ್ಯಗಳಿವೆ. ಈ ಮ್ಯಾಚ್ಗಳಲ್ಲಿ 2 ಜಯ ಸಾಧಿಸಿದರೆ ಶ್ರೇಯಸ್ ಅಯ್ಯರ್ ಪಡೆ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಲಿದೆ. ಅದರಂತೆ 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ನಲ್ಲಿ ಕಾಣಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡದ ಮುಂದಿನ ಎದುರಾಳಿಗಳೆಂದರೆ... ಡೆಲ್ಲಿ ಕ್ಯಾಪಿಟಲ್ಸ್ (ಮೇ.8), ಮುಂಬೈ ಇಂಡಿಯನ್ಸ್ (ಮೇ.11) ಹಾಗೂ ರಾಜಸ್ಥಾನ್ ರಾಯಲ್ಸ್ (ಮೇ.16). ಈ ಮೂರು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿದರೆ ಒಟ್ಟು 21 ಅಂಕಗಳೊಂದಿಗೆ ಪ್ಲೇಆಫ್ಗೇರಲಿದೆ.