RCB: ‘ಆರ್‌ಸಿಬಿ ಜೊತೆಗಿನ ಪಯಣ ಇನ್ನೂ ಮುಗಿದಿಲ್ಲ’; ಹ್ಯಾಪಿ ನ್ಯೂಸ್ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್
Glenn Maxwell: ಆರ್‌ಸಿಬಿ ತಂಡ ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಬಿಟ್ಟಿದೆ. ಆದರೆ ಮ್ಯಾಕ್ಸ್‌ವೆಲ್ ಅವರು ಈ ನಿರ್ಧಾರದ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಆರ್‌ಸಿಬಿ ಯ ತಂತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮುಂಬರುವ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮತ್ತೆ ಮ್ಯಾಕ್ಸ್‌ವೆಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
1 / 7
ಐಪಿಎಲ್ 2025 ರ ಮೆಗಾ ಹರಾಜಿಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ನವೆಂಬರ್ 24 ಮತ್ತು 25 ರಂದು ಆಟಗಾರರ ಹರಾಜು ನಡೆಯಲಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ 1574 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದ್ದವು. ಇದರಲ್ಲಿ ಕೆಲವು ಫ್ರಾಂಚೈಸಿಗಳು ಅಚ್ಚರಿಯ ನಿರ್ಧಾರವನ್ನು ಕೈಗೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದವು.
2 / 7
ಆ ಫ್ರಾಂಚೈಸಿಗಳ ಪೈಕಿ ಆರ್‌ಸಿಬಿ ಕೂಡ ಒಂದಾಗಿತ್ತು. ರಿಟೆನ್ಷನ್ ಪಟ್ಟಿ ಬಿಡುಗಡೆಯಾಗುವುದಕ್ಕೂ ಮುನ್ನ ಆರ್‌ಸಿಬಿ ಯಾವ್ಯಾವ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಅಂದಾಜಿಸಲಾಗಿತ್ತು. ಆ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರ ಹೆಸರು ಸಹ ಸೇರಿತ್ತು.
3 / 7
ಆದರೆ ಎಲ್ಲಾ ಊಹೆಗಳನ್ನು ಸುಳ್ಳು ಮಾಡಿದ್ದ ಆರ್‌ಸಿಬಿ, ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಅವರಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದರ್, ಯಶ್ ದಯಾಳ್ ಮಾತ್ರ ಸೇರಿದ್ದರು. ಹೀಗಾಗಿ ಮೇಲೆ ತಿಳಿಸಿರುವ ಮೂರು ಆಟಗಾರರು ಮುಂದಿನ ಆವೃತ್ತಿಯಿಂದ ಆರ್‌ಸಿಬಿ ಪರ ಆಡುವುದು ಅನುಮಾನ ಎಂದು ಹೇಳಲಾಗಿತ್ತು. ಆದರೀಗ ಈ ಬಗ್ಗೆ ಮಾತನಾಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
4 / 7
ಆರ್‌ಸಿಬಿ ಫ್ರಾಂಚೈಸಿ ತನ್ನನ್ನು ಉಳಿಸಿಕೊಂಡಿರದ ಬಗ್ಗೆ ಮೌನ ಮುರಿದಿರುವ ಮ್ಯಾಕ್ಸ್‌ವೆಲ್, ಫ್ರಾಂಚೈಸಿಯ ಕಾರ್ಯತಂತ್ರ ನಿಜಕ್ಕೂ ನನಗೆ ಇಷ್ಟವಾಗಿದೆ. ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಈ ರೀತಿಯಾಗಿ ಮಾಡಿದರೆ ಒಳಿತು. ನನ್ನನ್ನು ತಂಡದಿಂದ ಹೊರಗಿಡುವ ಮುನ್ನ ಮೊ ಬೊಬಾಟ್ ಮತ್ತು ಆಂಡಿ ಫ್ಲವರ್ಸ್ ನನಗೆ ಕರೆ ಮಾಡಿದ್ದರು. ವೀಡಿಯೊ ಕಾಲ್ನಲ್ಲಿ ನಮ್ಮ ನಡುವೆ 30 ನಿಮಿಷಕ್ಕೂ ಹೆಚ್ಚು ಸಮಯ ಮಾತುಕತೆ ನಡೆಯಿತು.
5 / 7
ಈ ವೇಳೆ ಈ ಇಬ್ಬರು ನನ್ನನ್ನು ಏಕೆ ಉಳಿಸಿಕೊಳ್ಳಲಿಲ್ಲ ಎಂಬುದನ್ನು ವಿವರವಾಗಿ ತಿಳಿಸಿದರು. ಉತ್ತಮ ತಂಡ ಕಟ್ಟಲು ನಾವು ಏನನ್ನು ನಿರೀಕ್ಷಿಸುತ್ತಿದ್ದವೆಂದು ಅವರು ನನಗೆ ಸಂಪೂರ್ಣ ಅರ್ಥ ಮಾಡಿಸಿದರು. ನನ್ನ ಪ್ರಕಾರ ಪ್ರತಿಯೊಂದು ತಂಡವೂ ಆರ್‌ಸಿಬಿ ಯಂತೆಯೇ ಮಾಡಬೇಕೆಂದು ನಾನು ಬಯಸುತ್ತೇನೆ. ಇದು ತಂಡ ಮತ್ತು ಆಟಗಾರರ ನಡುವಿನ ಸಂಬಂಧವನ್ನು ಹೆಚ್ಚು ಸುಧಾರಿಸುತ್ತದೆ.
6 / 7
ಹೀಗಾಗಿ ಮುಂಬರುವ ಸೀಸನ್ಗೆ ತಂಡದ ಕಾರ್ಯತಂತ್ರವನ್ನು ತಾನು ಅರ್ಥಮಾಡಿಕೊಂಡಿದ್ದೇನೆ. ಪ್ರಸ್ತುತ ಆರ್‌ಸಿಬಿ ಜೊತೆಗಿನ ನನ್ನ ಪ್ರಯಾಣ ಇನ್ನೂ ಮುಗಿದಿಲ್ಲ ಎಂದು ಹೇಳಲು ಬಯಸುತ್ತೇನೆ. ಆರ್‌ಸಿಬಿ ಫ್ರಾಂಚೈಸಿ ತಮ್ಮ ಸಿಬ್ಬಂದಿಯಲ್ಲೂ ಬದಲಾವಣೆಗಳನ್ನು ಮಾಡಿದೆ. ಹಾಗೆಯೇ ಸೂಕ್ತ ಆಟಗಾರರನ್ನು ಆಯ್ಕೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ನಾನು ಆ ತಂಡಕ್ಕೆ ಹಿಂತಿರುಗಲು ಇಷ್ಟಪಡುತ್ತೇನೆ. ಆಡಲು ಆರ್‌ಸಿಬಿ ಉತ್ತಮ ಫ್ರಾಂಚೈಸ್ ಆಗಿದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
7 / 7
ಇದರರ್ಥ ಆರ್‌ಸಿಬಿ ಬಳಿ ಇನ್ನು 3 ಆರ್ಟಿಎಮ್ ಆಯ್ಕೆಯಿದ್ದು, ಮೆಗಾ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ರನ್ನು ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನು ನಾವು ಮ್ಯಾಕ್ಸ್‌ವೆಲ್ ಅವರ ಮಾತಿನಿಂದ ಅರಿತುಕೊಳ್ಳಬಹುದಾಗಿದೆ. ಇದು ನಿಜವಾದರೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಆರ್‌ಸಿಬಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುವುದನ್ನು ನಾವು ಕಾಣಬಹುದಾಗಿದೆ.