ಲಕ್ನೋ ಸೂಪರ್ ಜೈಂಟ್ಸ್ ತಂಡದ ನೂತನ ನಾಯಕ ರಿಷಭ್ ಪಂತ್ (Rishabh Pant) ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ. ಅದು ಸಹ ಬ್ಯಾಟರ್ ಆಗಿ ಹಾಗೂ ನಾಯಕನಾಗಿ. ವಿಶಾಖಪಟ್ಟಣದ ವೈಎಸ್ಆರ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 133 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 5 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಅಲ್ಲದೆ 6ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು. ಅಲ್ಲಿಗೆ ಶೂನ್ಯದೊಂದಿಗೆ ರಿಷಭ್ ಪಂತ್ ಅವರ ಇನಿಂಗ್ಸ್ ಕೊನೆಗೊಂಡಿತು.
ಹೀಗೆ ಲಕ್ನೋ ಸೂಪರ್ ಜೈಂಟ್ಸ್ ಪರ ಚೊಚ್ಚಲ ಪಂದ್ಯದಲ್ಲೇ ಸೊನ್ನೆ ಸುತ್ತಿದರೂ ಪಂತ್ಗೆ 2 ಕೋಟಿ ರೂ. ಲಭಿಸಿರುವುದು ವಿಶೇಷ. ಅಂದರೆ ಈ ಬಾರಿಯ ಮೆಗಾ ಹರಾಜಿನ ಮೂಲಕ LSG ಫ್ರಾಂಚೈಸಿಯು ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ. ಇದರ ಜೊತೆಗೆ 14 ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರಿಗೆ ಬಿಸಿಸಿಐ ಕಡೆಯಿಂದ 1.05 ಕೋಟಿ ರೂ. ಪಂದ್ಯ ಶುಲ್ಕ ಸಿಗಲಿದೆ.
ಅದರಂತೆ ಈ ಬಾರಿಯ ಐಪಿಎಲ್ ಮೂಲಕ ರಿಷಭ್ ಪಂತ್ ಪಡೆಯಲಿರುವ ಒಟ್ಟು ಮೊತ್ತ 28.05 ಕೋಟಿ ರೂ. ಅಂದರೆ ಒಂದು ಪಂದ್ಯಕ್ಕೆ ಪಂತ್ಗೆ ಸಿಗಲಿರುವುದು ಬರೋಬ್ಬರಿ 2 ಕೋಟಿ ರೂ. ಇದೀಗ ಸೊನ್ನೆ ಸುತ್ತಿದರೂ ರಿಷಭ್ ಮೊದಲ ಮ್ಯಾಚ್ನಿಂದ ಎರಡು ಕೋಟಿ ರೂ. ಅನ್ನು ಜೇಬಿಗಿಳಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.3 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಬಾರಿಸಿ 1 ವಿಕೆಟ್ನ ರೋಚಕ ಜಯ ಸಾಧಿಸಿತು.