ಐಪಿಎಲ್ 2025 ರ11ನೇ ಪಂದ್ಯ ಸಿಎಸ್‌ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯವನ್ನು ಆತಿಥೇಯ ರಾಜಸ್ಥಾನ ತಂಡ 6 ರನ್ಗಳಿಂದ ಗೆದ್ದುಕೊಳ್ಳುವಲ್ಲೂ ಯಶಸ್ವಿಯಾಯಿತು. ಆದರೆ ಈ ಗೆಲುವಿನ ಸಂಭ್ರಮದ ನಡುವೆ ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್ಗೆ ಬಿಸಿಸಿಐ ದಂಡದ ಬರೆ ಎಳೆದಿದೆ.
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸದ ರಾಜಸ್ಥಾನ್ ನಾಯಕ ಪರಾಗ್ಗೆ ಬಿಸಿಸಿಐ ಬರೋಬ್ಬರಿ 12 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಿದೆ. ಇದೀಗ ಪರಾಗ್ ಅವರ ಪಂದ್ಯ ಶುಲ್ಕದಲ್ಲಿ ಈ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.
ಈ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್ ತಪ್ಪಿತಸ್ಥನೆಂದು ಸಾಭೀತಾದ ಎರಡನೇ ನಾಯಕ ರಿಯಾನ್ ಪರಾಗ್. ಅವರಿಗಿಂತ ಮೊದಲು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಈ ನಿಯಮವನ್ನು ಉಲ್ಲಂಘಿಸಿದಕ್ಕಾಗಿ 12 ಲಕ್ಷ ರೂಗಳನ್ನು ದಂಡ ಕಟ್ಟಿದ್ದಾರೆ. ನಿಧಾನಗತಿಯ ಓವರ್ ದರದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಐಪಿಎಲ್ ತಂಡದ ನಾಯಕರು ಪಾವತಿಸಬೇಕಾದ ಮೊತ್ತ ಇದು.
ಐಪಿಎಲ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ನಿಧಾನಗತಿಯ ಓವರ್ ದರಕ್ಕೆ ಸಂಬಂಧಿಸಿದಂತೆ ರಿಯಾನ್ ಪರಾಗ್ ತಂಡದ ಮೊದಲ ತಪ್ಪು ಇದಾಗಿರುವುದರಿಂದ, ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.22 ರ ಅಡಿಯಲ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ರಿಯಾನ್ ಪರಾಗ್‌ಗಿಂತ ಮೊದಲು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ದರಕ್ಕಾಗಿ ದಂಡ ವಿಧಿಸಲ್ಪಟ್ಟಿದ್ದರು. ಆ ಪಂದ್ಯದಲ್ಲಿ, ಒಂದು ಪಂದ್ಯದ ನಿಷೇಧವನ್ನು ಎದುರಿಸಿದ ನಂತರ ಅವರು ತಂಡಕ್ಕೆ ಮರಳಿದರು. ನಿಧಾನಗತಿಯ ಓವರ್ ರೇಟ್ ನಿಯಮವನ್ನು 3 ಬಾರಿ ಮುರಿದಕ್ಕಾಗಿ ಅವರ ಮೇಲೆ ಆ ನಿಷೇಧವನ್ನು ಹೇರಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಆ ನಿಯಮವನ್ನು ರದ್ದುಗೊಳಿಸಲಾಗಿದೆ.
ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 182 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್‌ಗಳನ್ನು ಮಾತ್ರ ಗಳಿಸಿತು. ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 19 ರನ್‌ಗಳು ಬೇಕಾಗಿದ್ದವು. ಆದರೆ ಈ ಗುರಿ ಬೆನ್ನಟ್ಟುವಲ್ಲಿ ಸಿಎಸ್‌ಕೆ ತಂಡ ವಿಫಲವಾಯಿತು.