- Kannada News Photo gallery Cricket photos Jasprit Bumrah Injury Update: Out for 2 Weeks, Misses IPL 2025 Matches
IPL 2025: ಮುಂಬೈಗೆ ಮರ್ಮಾಘಾತ; ಇನ್ನೆರಡು ವಾರ ಐಪಿಎಲ್ನಿಂದ ಬುಮ್ರಾ ಔಟ್..!
Jasprit Bumrah Injury Update: ಮುಂಬೈ ಇಂಡಿಯನ್ಸ್‌ನ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮುಂದಿನ ಎರಡು ವಾರಗಳ ಕಾಲ IPL 2025 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ ಅವರಿಗೆ ಇನ್ನೂ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ ಆದರೆ ಅವರ ಮರಳುವಿಕೆಯ ಬಗ್ಗೆ ಖಚಿತತೆ ಇಲ್ಲ.
Updated on:Apr 01, 2025 | 6:31 AM

2025 ರ ಐಪಿಎಲ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವಿನ ಖಾತೆ ತೆರೆಯಲು ಇದುವರೆಗೂ ಸಾಧ್ಯವಾಗಿಲ್ಲ. ಆಡಿರುವ ಎರಡೂ ಪಂದ್ಯಗಳಲ್ಲು ಮುಂಬೈ ತಂಡ ಸೋಲು ಕಂಡಿದೆ. ಇದೀಗ ಕೆಕೆಆರ್ ವಿರುದ್ಧ ಆಡುತ್ತಿರುವ ಮುಂಬೈಗೆ ಯಾವ ಫಲಿತಾಂಶ ಸಿಗಲಿದೆ ಎಂಬುದು ಖಚಿತವಾಗುವ ಮುನ್ನವೇ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ.

ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಇಲ್ಲದೆ ಆಟವಾಡುವುದನ್ನು ಮುಂದುವರಿಸಬೇಕಾಗುತ್ತದೆ. ಮುಂದಿನ ಎರಡು ವಾರಗಳ ಕಾಲ ಜಸ್ಪ್ರೀತ್ ಬುಮ್ರಾ ಐಪಿಎಲ್ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂಬ ವರದಿಗಳಿವೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದರೂ, ಅವರಿಗೆ ಇನ್ನೂ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ಕಿಲ್ಲ.

ಬುಮ್ರಾ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಕ್ರೀಡಾ ವಿಜ್ಞಾನ ತಂಡವು ಮೇಲ್ವಿಚಾರಣೆ ಮಾಡುತ್ತಿದೆ. ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ ಅಂದಿನಿಂದ ಕ್ರಿಕೆಟ್ನಿಂದ ಹೊರಗುಳಿದಿದ್ದು, ಅವರು ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾಗವಹಿಸಲಿಲ್ಲ ಇದೀಗ ಇದುವರೆಗೂ ಐಪಿಎಲ್ ಆಡುವ ಬಗ್ಗೆ ಖಚಿತತೆ ಸಿಕ್ಕಿಲ್ಲ.

ಬಿಸಿಸಿಐ ಅಧಿಕಾರಿಯೊಬ್ಬರೊಬ್ಬರನ್ನು ಉಲ್ಲೇಖಿಸಿ ವರದಿಯಾಗಿರುವ ಪ್ರಕಾರ, ‘ಪ್ರಸ್ತುತ ಬುಮ್ರಾ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಯಾವಾಗ ಕ್ರಿಕೆಟ್ಗೆ ಮರಳುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಂತ ಹಂತವಾಗಿ ಅವರು ತನ್ನ ಕೆಲಸದ ಹೊರೆ ಹೆಚ್ಚಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ, ಅವರು ಮುಂದಿನ ಎರಡು ವಾರಗಳಲ್ಲಿ ಆಟಕ್ಕೆ ಸಿದ್ಧರಾಗಬಹುದು ಎಂದು ವರದಿಯಾಗಿದೆ.

ಈಗ ವರದಿಯಾಗಿರುವಂತೆ, ಒಂದು ವೇಳೆ ಬುಮ್ರಾ ಮುಂದಿನ ಎರಡು ವಾರಗಳ ಕಾಲ ಆಡದಿದ್ದರೆ, ಮುಂಬೈ ತಂಡ ಈ ಅವಧಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳನ್ನು ಆಡಲಿದೆ. ಇದರರ್ಥ ಬುಮ್ರಾ ಐಪಿಎಲ್‌ನ ಮೊದಲ 6-7 ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಬುಮ್ರಾ ಫಿಟ್ ಆಗುತ್ತಾರೆ ಎಂದು ಬಿಸಿಸಿಐ ಅಥವಾ ಎನ್‌ಸಿಎಯಲ್ಲಿ ಯಾರೂ ಹೇಳಿಕೊಳ್ಳುತ್ತಿಲ್ಲವಾದರೂ, ಅವರು ಬೇಗನೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬುಮ್ರಾ ವಿಷಯದಲ್ಲಿ ಯಾವುದೇ ಆತುರವಿಲ್ಲ. ವೈದ್ಯರು, ಫಿಸಿಯೋಗಳು ಮತ್ತು ಆಟಗಾರರು 100% ಫಿಟ್ ಆಗಿದ್ದರೆ ಮಾತ್ರ ಅನುಮತಿ ನೀಡುತ್ತಾರೆ ಎಂದು ಬಿಸಿಸಿಐ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
Published On - 8:53 pm, Mon, 31 March 25



















