IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 14 ರಿಂದ ರಂಗು ರಂಗಿನ ಕ್ರಿಕೆಟ್ ಟೂರ್ನಿ ಶುರುವಾಗಲಿದ್ದು, ಮೇ ತಿಂಗಳ ಕೊನೆಯ ವಾರದಲ್ಲಿ ಫೈನಲ್ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ.
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ಗೆ ಪ್ರವೇಶಿಸಿದರೆ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ಮೇ 25 ರಂದು ನಡೆಯಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ಟೀಮ್ ಇಂಡಿಯಾ WTC ಫೈನಲ್ಗೆ ತಲುಪದಿದ್ದರೆ ದಿನಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು ಜೂನ್ 11 ರಿಂದ ಶುರುವಾಗಲಿದೆ. ಅದಕ್ಕೂ ಎರಡು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿಯನ್ನು ಪೂರ್ಣಗೊಳಿಸಲು ಆಯೋಜಕರು ನಿರ್ಧರಿಸಿದ್ದಾರೆ. ಆದರೆ ಭಾರತ ತಂಡ ಫೈನಲ್ಗೆ ತಲುಪದಿದ್ದರೆ ಮೇ ಅಂತ್ಯದವರೆಗೆ ಐಪಿಎಲ್ ಪಂದ್ಯಾವಳಿ ನಡೆಯುವ ಸಾಧ್ಯತೆಯಿದೆ.
ಇನ್ನು ಮಾರ್ಚ್ 14 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಉದ್ಘಾಟನಾ ಪಂದ್ಯವು ಈ ಬಾರಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಸಾಧ್ಯತೆ ಹೆಚ್ಚು.
ಐಪಿಎಲ್ ಆರಂಭಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ನಡೆಯಲಿದೆ. ಈ ಟೂರ್ನಿಯು ಫೆಬ್ರವರಿ 6 ರಿಂದ ಶುರುವಾಗಲಿದ್ದು, ಮಾರ್ಚ್ 9 ರಂದು ಮುಗಿಯಲಿದೆ. ಈ ಮೂಲಕ WPL ಮತ್ತು IPL ನಡುವೆ ಒಂದು ವಾರಗಳ ಅಂತರವಿಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಫೆಬ್ರವರಿ ತಿಂಗಳಿಂದಲೇ ಭಾರತದಲ್ಲಿ ಟಿ20 ಹಬ್ಬ ಶುರುವಾಗಲಿದ್ದು, ಮೇ ಅಂತ್ಯದವರೆಗೆ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ.