
ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ರಾಜಸ್ಥಾನದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಅವರನ್ನು ದಾಖಲೆಯ ಮೊತ್ತ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ. ಕೇವಲ 19 ವರ್ಷ ವಯಸ್ಸಿನ ಈ ಅನ್‌ಕ್ಯಾಪ್ಡ್ ಆಟಗಾರನಿಗಾಗಿ ಹಲವಾರು ಫ್ರಾಂಚೈಸಿಗಳು ಭಾರಿ ಬಿಡ್ ಮಾಡಿದವು. ಅಂತಿಮವಾಗಿ, ಚೆನ್ನೈ ಸೂಪರ್ ಕಿಂಗ್ಸ್ 14.2 ಕೋಟಿ ಮೊತ್ತಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಮೂಲ ಬೆಲೆ 30 ಲಕ್ಷ ರೂಗಳೊಂದಿಗೆ ಹರಾಜಿಗೆ ಬಂದ ಕಾರ್ತಿಕ್ಗಾಗಿ ಮೊದಲು ಮುಂಬೈ ಬಿಡ್ ಮಾಡಿತು. ಆ ಬಳಿಕ ಲಕ್ನೋ, ಸಿಎಸ್ಕೆ ನಡುವೆ ಪೈಪೋಟಿ ನಡೆಯಿತು. ಲಕ್ನೋ ಹೊರಬಿದ್ದ ಬಳಿಕ ಕೆಕೆಆರ್ ಎಂಟ್ರಿಕೊಟ್ಟಿತು. ಕೆಕೆಆರ್ ಹೊರಬಿದ್ದ ಬಳಿಕ ಹೈದರಾಬಾದ್ ಬಿಡ್ ಮಾಡಿತು. ಅಂತಿಮವಾಗಿ ಸಿಎಸ್ಕೆ ಈ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕಳೆದ ವರ್ಷ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್‌ನ ಶಿಬಿರದಲ್ಲೂ ಕಾಣಿಸಿಕೊಂಡಿದ್ದರು. ಹೀಗಾಗಿ ಗಾಯದ ಬದಲಿಯಾಗಿ ಅವರನ್ನು ಸಿಎಸ್ಕೆ ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ ಹರಾಜು ನೋಂದಣಿ ಕೊರತೆಯಿಂದಾಗಿ ಅದು ಆಗಲಿಲ್ಲ.

ಸಿಕ್ಸರ್‌ಗಳನ್ನು ಬಾರಿಸುವುದಕ್ಕೆ ಹೆಸರುವಾಸಿಯಾಗಿರುವ ಕಾರ್ತಿಕ್ ಶರ್ಮಾ 2024-25ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು, ಉತ್ತರಾಖಂಡ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೂ ಶತಕ ಬಾರಿಸಿದರು. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಭಾಗವಹಿಸಿದ್ದ ಕಾರ್ತಿಕ್, ಗಾಯದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು.

ಕಾರ್ತಿಕ್ ಶರ್ಮಾ ಇದುವರೆಗೆ 12 ಪಂದ್ಯಗಳನ್ನು ಆಡಿದ್ದು, 30.36 ಸರಾಸರಿಯಲ್ಲಿ 334 ರನ್ ಗಳಿಸಿದ್ದಾರೆ. ಇದರಲ್ಲಿ 16 ಬೌಂಡರಿಗಳು ಮತ್ತು 28 ಸಿಕ್ಸರ್‌ಗಳು ಸೇರಿವೆ. ಹಾಗೆಯೇ 8 ಲಿಸ್ಟ್ ಎ ಪಂದ್ಯಗಳಲ್ಲಿ 3 ಶತಕಗಳು ಸೇರಿದಂತೆ 479 ರನ್ ಗಳಿಸಿದ್ದಾರೆ. ಕಾರ್ತಿಕ್ ಶರ್ಮಾ ಟೀಂ ಇಂಡಿಯಾ ಆಟಗಾರ ದೀಪಕ್ ಚಾಹರ್ ಅವರ ತಂದೆ ನಡೆಸುತ್ತಿರುವ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ.