
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19ರ ಮಿನಿ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ. ಅದರಂತೆ ಮುಂದಿನ ತಿಂಗಳು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ಮಿನಿ ಆಕ್ಷನ್ ಪ್ರಕ್ರಿಯೆ ನಡೆಯಲಿದೆ. ಈ ಹರಾಜನ್ನು ಒಂದೇ ದಿನದಲ್ಲಿ ಮುಗಿಸಲು ಯೋಜನೆ ರೂಪಿಸಲಾಗಿದೆ.

ಕಳೆದ ಬಾರಿಯ ಮೆಗಾ ಹರಾಜನ್ನು ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿತ್ತು. 2 ದಿನಗಳ ಕಾಲ ನಡೆದಿದ್ದ ಹರಾಜಿಗೆ ರಿಯಾದ್ ನಗರದ ಪ್ರತಿಷ್ಠಿತ ಐಷಾರಾಮಿ ಹೋಟೆಲ್ ಆತಿಥ್ಯವಹಿಸಿತ್ತು. ಈ ಬಾರಿ ಮಿನಿ ಹರಾಜು ನಡೆಯುತ್ತಿರುವುದರಿಂದ ಕೇವಲ ಒಂದು ದಿನದಲ್ಲೇ ಆಕ್ಷನ್ ಪ್ರಕ್ರಿಯೆ ಮುಗಿಯಲಿದೆ.

ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಿದ್ದು, ಈ ಮೂಲಕ ಹರಾಜಿಗಾಗಿ ಸಿದ್ಧತೆಗಳನ್ನು ಶುರು ಮಾಡಿದ್ದಾರೆ. ಅದರಂತೆ 10 ಫ್ರಾಂಚೈಸಿಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಮಿನಿ ಆಕ್ಷನ್ ನಡೆಯಲಿದೆ.

ಅಂದರೆ ಐಪಿಎಲ್ ನಿಯಮದ ಪ್ರಕಾರ ಪ್ರತಿ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಮಿನಿ ಹರಾಜಿಗೂ ಮುನ್ನ ಬಹುತೇಕ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿರುವುದರಿಂದ ಕಡಿಮೆ ಸ್ಲಾಟ್ಗಳಿಗೆ ಮಾತ್ರ ಹರಾಜು ನಡೆಯಲಿದೆ.

ಮಿನಿ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಒಟ್ಟು 173 ಆಟಗಾರರನ್ನು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿದೆ. ಅದರಂತೆ ಉಳಿದ 77 ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಹರಾಜಿಗಾಗಿ ಆಟಗಾರರ ಹೆಸರು ನೊಂದಾಣಿ ಪ್ರಕ್ರಿಯೆ ಕೂಡ ನಡೆಯಲಿದ್ದು, ಆ ಬಳಿಕ ಆ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಈ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಆಟಗಾರರ ಹೆಸರುಗಳು ಮಾತ್ರ ಡಿಸೆಂಬರ್ 16 ರಂದು ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.