93 ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಅತ್ಯಂತ ಹೀನಾಯ ಸೋಲು..!
India vs South Africa, 1st Test: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 189 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 153 ರನ್ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ನಲ್ಲಿನ 30 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 124 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 93 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 30 ರನ್ಗಳಿಂದ ಸೋಲನುಭವಿಸಿದೆ.
Updated on: Nov 16, 2025 | 2:53 PM

ಭಾರತ ತಂಡವು ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಬರೋಬ್ಬರಿ 93 ವರ್ಷಗಳಾಗಿವೆ. ಈ 93 ವರ್ಷಗಳಲ್ಲಿ ಟೀಮ್ ಇಂಡಿಯಾ (Team India) ಹಲವು ಏಳು ಬೀಳುಗಳನ್ನು ಕಂಡಿದೆ. ಈ ಏಳು ಬೀಳುಗಳ ನಡುವೆ ಇದೀಗ ಭಾರತ ತಂಡವು ಅತ್ಯಲ್ಪ ಮೊತ್ತವನ್ನು ಬೆನ್ನತ್ತಲಾಗದೇ ಸೋತು ಭಾರೀ ಮುಖಭಂಗ ಅನುಭವಿಸಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 30 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ 124 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ 93 ರನ್ಗಳಿಸುವಷ್ಟರಲ್ಲಿ ಸರ್ಪಪತನ ಕಂಡಿದೆ.

ಈ ಮೂಲಕ ಟೀಮ್ ಇಂಡಿಯಾಗೆ ತವರಿನಲ್ಲಿ ಹೀನಾಯ ಸೋಲುಣಿಸಿದ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತಂಡ ತನ್ನದಾಗಿಸಿಕೊಂಡಿದೆ. ಅಂದರೆ ಭಾರತ ತಂಡವು ತವರು ಮೈದಾನದಲ್ಲಿ ಒಮ್ಮೆಯೂ 130 ಕ್ಕಿಂತ ಕಡಿಮೆ ಗುರಿಯನ್ನು ಬೆನ್ನತ್ತಲಾಗದೇ ಸೋತ ಚರಿತ್ರೆಯೇ ಇರಲಿಲ್ಲ.

2024 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ 147 ರನ್ಗಳ ಗುರಿ ಬೆನ್ನತ್ತಲಾಗದೇ ಟೀಮ್ ಇಂಡಿಯಾ 25 ರನ್ಗಳಿಂದ ಸೋತಿದ್ದು ತವರಿನಲ್ಲಿನ ಹೀನಾಯ ಸೋಲಾಗಿತ್ತು. ಇದೀಗ ಅದಕ್ಕಿಂತ ಕೆಟ್ಟ ದಾಖಲೆಯೊಂದನ್ನು ಟೀಮ್ ಇಂಡಿಯಾ ನಿರ್ಮಿಸಿದೆ.

ಸೌತ್ ಆಫ್ರಿಕಾ ತಂಡ ನೀಡಿದ 124 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 93 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ತವರಿನಲ್ಲಿ ಅತ್ಯಲ್ಪ ಗುರಿ ಬೆನ್ನತ್ತಲಾಗದೇ ಅತ್ಯಂತ ಹೀನಾಯ ಸೋಲನುಭವಿಸಿದೆ. ಅಷ್ಟೇ ಅಲ್ಲದೆ ಭಾರತದಲ್ಲಿನ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಗುರಿ ಪಡೆದು 100 ರನ್ಗಳಿಸಲಾಗದೇ ಟೀಮ್ ಇಂಡಿಯಾ ಸೋತಿರುವುದು ಇದೇ ಮೊದಲು. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಭಾರತದ ಈ ಸೋಲು ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿಯಲಿದೆ.
