
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ 1355 ಆಟಗಾರರಲ್ಲಿ 45 ಮಂದಿ ಗರಿಷ್ಠ ಮೂಲ ಬೆಲೆ ಘೋಷಿಸಿದ್ದಾರೆ. ಅವರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಇಬ್ಬರು ಮಾಜಿ ಆಟಗಾರರು ಕೂಡ ಇರುವುದು ವಿಶೇಷ.

ಐಪಿಎಲ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಮುಂಬರುವ ಐಪಿಎಲ್ಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಸಹ ಗರಿಷ್ಠ ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ.

ಐಪಿಎಲ್ 2025 ರಲ್ಲಿ ಆರ್ಸಿಬಿ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಲಿಯಾಮ್ ಲಿವಿಂಗ್ಸ್ಟೋನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಒಟ್ಟು 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಲಿವಿಂಗ್ಸ್ಟೋನ್ ಕೇವಲ 112 ರನ್ ಮಾತ್ರ ಕಲೆಹಾಕಿದ್ದರು. ಅಲ್ಲದೆ 5 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಕಬಳಿಸಿದ್ದು 2 ವಿಕೆಟ್ ಮಾತ್ರ. ಹೀಗಾಗಿಯೇ ಆರ್ಸಿಬಿ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಇದೀಗ 2 ಕೋಟಿ ರೂ. ಬೇಸ್ ಪ್ರೈಸ್ನೊಂದಿಗೆ ಲಿವಿಂಗ್ಸ್ಟೋನ್ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಳೆದ ಸೀಸನ್ನಲ್ಲಿ 2 ಮ್ಯಾಚ್ ಆಡಿದ್ದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ 4 ವಿಕೆಟ್ ಕಬಳಿಸಿದ್ದರು. ಇದಾಗ್ಯೂ ಆರ್ಸಿಬಿ ಅವರನ್ನು ರಿಟೈನ್ ಮಾಡಿಕೊಂಡಿರಲಿಲ್ಲ. ಇದೀಗ ಮಿನಿ ಹರಾಜಿಗಾಗಿ ಲುಂಗಿ ಎನ್ಗಿಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಸಹ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ.

ಅಂದಹಾಗೆ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 8.75 ಕೋಟಿ ರೂ.ಗೆ ಖರೀದಿಸಿತ್ತು. ಹಾಗೆಯೇ ಲುಂಗಿ ಎನ್ಗಿಡಿ 1 ಕೋಟಿ ರೂ.ಗೆ ಆರ್ಸಿಬಿ ಪರ ಆಡಿದ್ದರು. ಇದೀಗ ಇಬ್ಬರು ಆಟಗಾರರು 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.